ADVERTISEMENT

ಶಾಸಕರಿಂದ ಅಧಿಕಾರಿಗಳಿಗೆ ‘ನೀತಿ ಪಾಠ'

ಕೆಲಸ ಮಾಡದವರಿಗೆ ಜಾಗವಿಲ್ಲ -ಸಭೆಯಲ್ಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:11 IST
Last Updated 16 ಜೂನ್ 2018, 10:11 IST

ಪುತ್ತೂರು: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ನೀಡುವ ಮೂಲಕ ಚರಿತ್ರೆ ನಿರ್ಮಿಸುವ ಕೆಲಸ ಅಧಿಕಾರಿಗಳಿಂದಾಗಬೇಕು. ಪ್ರತಿದಿನ ಕನಿಷ್ಠ 8 ಗಂಟೆ ದುಡಿಯುವ ಪರಿಪೂರ್ಣ ಅಧಿಕಾರಿಗಳಾಗಬೇಕು. ಜನರು ನಿಮ್ಮನ್ನು 'ಕಪ್ಪು ಗ್ಲಾಸ್' ಹಾಕಿ ನೋಡುವ ಬದಲು 'ಕ್ಲೀನ್ ಗ್ಲಾಸ್' ಮೂಲಕ ನೋಡುವಂತೆ ಕೆಲಸ ಮಾಡಿ. ಭ್ರಷ್ಟಾಚಾರದಿಂದ ದೂರ ಇರಿ. ಇಂತಹ ಕೆಲಸ ಮಾಡದ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ. ಅವರಿಗೆ ಬೇರೆಯೇ ಜಾಗವಿದೆ. ಅಲ್ಲಿಗೆ ಹೋಗಬಹುದು. ನಾನು ಯಾವುದೇ ಮುಲಾಜಿಗೆ ಒಳಗಾಗದೆ ಅಂಥವರನ್ನು ಕಳುಹಿಸುವ ಕೆಲಸ ಮಾಡುತ್ತೇನೆ...’

ಪುತ್ತೂರು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಾಕೃತಿಕ ವಿಕೋಪ ಹಾಗೂ ಮಳೆಹಾನಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಸಂಜೀವ ಮಠಂದೂರು ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಎಚ್ಚರಿಸುವ ಜೊತೆಗೆ ಅಧಿಕಾರಿಗಳಿಗೆ ಬೋಧಿಸಿದ ನೀತಿ ಪಾಠ ಹೀಗಿತ್ತು.

ಮೆಸ್ಕಾಂಗೆ ₹ 1.29 ಕೋಟಿ ನಷ್ಟ: ಮಳೆ-ಗಾಳಿಯ ಅಬ್ಬರದಿಂದಾಗಿ ಪುತ್ತೂರು ಮೆಸ್ಕಾಂ ಉಪವಿಭಾಗದಲ್ಲಿ 1,316 ವಿದ್ಯುತ್ ಕಂಬಗಳು ಇದುವರೆಗೆ ನಾಶವಾಗಿದ್ದು, ಮೆಸ್ಕಾಂಗೆ ₹1.29 ಕೋಟಿ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿ ಮಾಹಿತಿ ನೀಡಿದರು. ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 1,080 ಮನೆಗಳು ಇನ್ನೂ ವಿದ್ಯುತ್ ಸಂಪರ್ಕ ಪಡೆದಿಲ್ಲ. ಈ ಬಗ್ಗೆ ಸರ್ವೆ ಕಾರ್ಯ ನಡೆಸಲಾಗಿದ್ದು, ಕೆಲವು ಮನೆಗಳಿಗೆ ವಿದ್ಯುತ್ ವೈರಿಂಗ್ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜನರ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸ್ಪಂದಿಸುವ ಕೆಲಸ ಮೊದಲು ಆಗಬೇಕು. ಸಾಮಾಜಿಕ ಜಾಲತಾಣಗಳನ್ನು ನಿಮ್ಮ ಇಲಾಖೆ ಬಳಸಿಕೊಳ್ಳಬೇಕು’ ಎಂದು ಶಾಸಕ ಸಂಜೀವ ಮಠಂದೂರು ಅವರು ಸೂಚಿಸಿದರು.

‘ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ 110 ಕೆವಿ ಸಾಮರ್ಥ್ಯದ ವಿದ್ಯುತ್ ಸಬ್ಸ್ಟೇಷನ್ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು. ಉಪ್ಪಿನಂಗಡಿಯಲ್ಲಿ ಮಠ ಎಂಬಲ್ಲಿ 33ಕೆವಿ ಹಾಗೂ ಕೈಕಾರದಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಿಸಲು ಇಲಾಖೆ ತಕ್ಷಣ ಚಾಲನೆ ನೀಡಬೇಕು’ ಎಂದವರು ಸೂಚಿಸಿದರು.

ರಸ್ತೆ ₹83 ಲಕ್ಷ ನಷ್ಟ: ಮಳೆಯಿಂದಾಗಿ ತಾಲ್ಲೂಕಿನ 22 ವಿವಿಧ ರಸ್ತೆಗಳಿಗೆ ಹಾನಿಯಾಗಿದ್ದು, ₹83 ಲಕ್ಷ ನಷ್ಟವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಇಲಾಖೆಯ ಅಧಿಕಾರಿ ರೋಹಿದಾಸ್ ತಿಳಿಸಿದರು. ಲೋಕೋಪಯೋಗಿ ರಸ್ತೆಗಳಲ್ಲಿ ವಿಶೇಷ ಹಾನಿ ಇಲ್ಲ ಎಂದು ಅಧಿಕಾರಿ ಗೋಕುಲ್ ನಾಥ್  ಹೇಳಿದರು.

ನಿರ್ಮಿತಿ ಕೇಂದ್ರದ ಕಾಮಗಾರಿಗಳ ಬಗೆಗೆ ಹಲವಾರು ದೂರುಗಳಿವೆ.  ಕಾಮಗಾರಿಗಳ ಬಗ್ಗೆ ಲಿಖಿತ ಮಾಹಿತಿ ನನಗೆ ಕೊಡಬೇಕು ಎಂದು ಶಾಸಕರು ಅಧಿಕಾರಿಗೆ ಸೂಚಿಸಿದರು.

ಖಡಕ್ ಸೂಚನೆ: ಪುತ್ತೂರು ಉಪನೋಂದಣಾ ಕಚೇರಿಯ ಸ್ಥಳಾಂತರ ವಿವಾದ ಹಲವು ಸಮಯದಿಂದ ನಡೆಯುತ್ತಿದ್ದು, ಯಾಕೆ ಮಿನಿವಿಧಾನ ಸೌಧಕ್ಕೆ ಸ್ಥಳಾಂತರವಾಗಿಲ್ಲ ಎಂದು ಶಾಸಕ ಸಂಜೀವ ಮಠಂದೂರು ಅವರು ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ನೋಂದಣಿ ಕಚೇರಿ ಅಧಿಕಾರಿ ಇಲಾಖೆಯಿಂದ ಪತ್ರ ಬಂದಿಲ್ಲ ಎಂದರು. ನೀವು ಕಳುಹಿಸಿದ ಪತ್ರ ನನಗೆ ಕೊಡಿ. ನಾನು ನೋಡುತ್ತೇನೆ. ಮಿನಿವಿಧಾನ ಸೌಧಕ್ಕೆ ನೋಂದಣಾ ಕಚೇರಿ ಸ್ಥಳಾಂತರ ಆಗಬೇಕು ಎಂದು ಖಡಕ್ ಸೂಚನೆ ನೀಡಿದರು.

ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ತಹಶೀಲ್ದಾರ್ ಅನಂತಶಂಕರ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಭವಾನಿ ಚಿದಾನಂದ್, ಉಪಾಧ್ಯಕ್ಷೆ ರಾಜೇಶ್ವರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಜಗದೀಶ್, ತಾಲ್ಲೂಕು ಪಂಚಾಯತಿ ಸದಸ್ಯ ಹರೀಶ್ ಬಿಜತ್ರೆ, ನಗರಸಭಾ ಉಪಾಧ್ಯಕ್ಷ ವಿಶ್ವನಾಥ್ ಗೌಡ, ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ಬೂಡಿಯಾರ್ ಇದ್ದರು.

ಅವರೇ ತಡ, ಇವರಿಗೆ ಬೋಧನೆ!

ಪ್ರಾಕೃತಿಕ ವಿಕೋಪ ಮಳೆ ಹಾನಿ ಸಭೆಗೆ 1 ಗಂಟೆ ತಡವಾಗಿ ಬಂದ ಶಾಸಕ ಸಂಜೀವ ಮಠಂದೂರು `ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ನಿಮ್ಮನ್ನು ನೋಡಿ ನಿಮ್ಮ ಅಧೀನ ಅಧಿಕಾರಿಗಳು ಕೂಡಾ ಸಮಯಕ್ಕೆ ಸರಿಯಾಗಿ ಬರೋದಿಲ್ಲ ' ಎಂದು ಅಧಿಕಾರಿಗಳಿಗೆ ನೀತಿ ಪಾಠ ಬೋಧಿಸಿದರು...!

ತಾಲ್ಲೂಕು ಪಂಚಾಯತಿನ ಸಭಾಂಗಣದಲ್ಲಿ ಶುಕ್ರವಾರ 11 ಗಂಟೆಗೆ ಪ್ರಾಕೃತಿಕ ವಿಕೋಪ ಹಾಗೂ ಮಳೆಹಾನಿಯ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಿದ್ದರು. ಹೀಗಾಘಿ ಅಧಿಕಾರಿಗಳು ತಡವಾಗಿ ಆಗಮಿಸಿದ ಶಾಸಕರ ಸಮಯ ಪ್ರಜ್ಞೆಯ ಪಾಠ ಕೇಳಿ ತಮ್ಮಲ್ಲೇ ಅಚ್ಚರಿ ವ್ಯಕ್ತಪಡಿಸಿದರು.

ಶಿರಾಡಿ ಘಾಟ್‌ ರಸ್ತೆ: ಜುಲೈ 1ರಂದು ಮುಕ್ತ

‘ ಶಿರಾಡಿ ಘಾಟ್ ರಸ್ತೆ ಜುಲೈ 1ರಂದು ಸಂಚಾರಮುಕ್ತಗೊಳ್ಳಲಿದೆ’ ಎಂದು ಶಾಸಕ ಸಂಜೀವ ಮಂಠಂದೂರುಅಧಿಕಾರಿಗಳಿಗೆ ಸೂಚಿಸಿದರು. ‘ಅರಣ್ಯ ಇಲಾಖೆ ರಸ್ತೆ ಬದಿಗಳಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮುಂದಾಗಬೇಕು. ಈ ಹೆದ್ದಾರಿ ಹಾಗೂ ಪುತ್ತೂರು- ಉಪ್ಪಿನಂಗಡಿ, ಕಡಬ ಭಾಗದಲ್ಲಿ ರಸ್ತೆ ಬದಿಗಳಲ್ಲಿರುವ ಅಪಾಯಕಾರಿ ಮರಗಳನ್ನು ಒಂದು ವಾರದೊಳಗೆ ತೆರವುಗೊಳಿಸಬೇಕು’ ಎಂದು  ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.