ADVERTISEMENT

ಶಾಸಕರ ಸಭೆ ನಿರ್ಧಾರ ಅನೂರ್ಜಿತ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 9:50 IST
Last Updated 9 ಸೆಪ್ಟೆಂಬರ್ 2011, 9:50 IST

ಸುಳ್ಯ: ಸುಳ್ಯ ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ಸುಮಾರು ಒಂದು ತಿಂಗಳ ಕಾಲ ಇಡೀ ರಸ್ತೆಯನ್ನು ಬಂದ್ ಮಾಡಬೇಕೆಂಬ ~ಗೌಪ್ಯ~ ಸಭೆಯ ತೀರ್ಮಾನ ಮತ್ತು ಇದಕ್ಕೆ ಕುರಿತಂತೆ ಜಿಲ್ಲಾಧಿಕಾರಿ ಅಧಿಸೂಚನೆಗೆ ಹಿನ್ನಡೆಯುಂಟಾಗಿದ್ದು ಜನರ ಒಕ್ಕೊರಲ ಬೇಡಿಕೆಗೆ ಆಡಳಿತ ಮಣಿದಿದೆ.

ಗುರುವಾರ ಸುಳ್ಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಸ್ತೆಯನ್ನು ಪೂರ್ತಿ ಬಂದ್ ಮಾಡದೇ ಮೊದಲು ಒಂದು ಬದಿ ಮಾತ್ರ ಕಾಮಗಾರಿ ನಡೆಸುವುದು, ಅದು ಪೂರ್ಣಗೊಂಡ ಬಳಿಕ ಇನ್ನೊಂದು ಬದಿ ನಿರ್ವಹಿಸುವುದು ಮತ್ತು ಕೆಲಸವನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.

ತರಾತುರಿ ತೀರ್ಮಾನಕ್ಕೆ ವಿರೋಧ: ಪಟ್ಟಣದ ರಸ್ತೆ ಅಭಿವೃದ್ಧಿ ಭಾಗವಾಗಿ ಒಳಚರಂಡಿಗೆ ಕಾಂಕ್ರೀಟ್ ಮ್ಯಾನ್‌ಹೋಲ್ ನಿರ್ಮಿಸಿ ರಸ್ತೆಯ ಎರಡೂ  ಕಡೆಗೆ ಸಂಪರ್ಕ ಕಲ್ಪಿಸುವ ಕೆಲಸಕ್ಕೆ ಸೆಪ್ಟೆಂಬರ್ 8ರಿಂದ ಅಕ್ಟೋಬರ್ 15ರವರೆಗೆ ಸುಳ್ಯದ ರಸ್ತೆ ಬಂದ್ ಮಾಡಲಾಗುವುದು ಎಂದು ಶಾಸಕ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ  ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ಈ ಸಭೆಗೆ ವರ್ತಕರನ್ನು, ಮಾಧ್ಯಮದವರನ್ನು, ಇತರ ಸಂಘ ಸಂಸ್ಥೆಯವರನ್ನು ಕರೆದಿರಲಿಲ್ಲ. ಮಾತ್ರವಲ್ಲ ಇಂಥದ್ದೊಂದು ತೀರ್ಮಾನಕ್ಕೆ ಮುಂಚಿತವಾಗಿ ಯಾವುದೇ ಪೂರ್ವ ಸಿದ್ಧತೆಯನ್ನೂ ಆಡಳಿತ ಮಾಡಿಕೊಂಡಿರಲಿಲ್ಲ. ಈ ಸಭೆಯ ತೀರ್ಮಾನದಂತೆ ಕಳೆದ 6ರಂದು ಜಿಲ್ಲಾಧಿಕಾರಿಗಳು ರಸ್ತೆ ಬಂದ್ ಅಧಿಸೂಚನೆಯನ್ನೂ ಹೊರಡಿಸಿದ್ದರು.

ಏಕಪಕ್ಷೀಯ ಮತ್ತು ತುರಾತುರಿಯ ತೀರ್ಮಾನದಿಂದ ಆಕ್ರೋಶಗೊಂಡ ಪಟ್ಟಣದ ವರ್ತಕರು ಬುಧವಾರ ಅಂಗಡಿಗಳನ್ನು ಬಂದ್ ಮಾಡಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಸಂದರ್ಭ ಗುರುವಾರ ಸಭೆ ನಡೆಸಲು ತೀರ್ಮಾನಿಸಲಾಗಿತ್ತು.

ಅದರಂತೆ ಗುರುವಾರ ತಹಸೀಲ್ದಾರ್ ವೈದ್ಯನಾಥ್ ನೇತೃತ್ವದಲ್ಲಿ ನಡೆದ ಸಭೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ಒಳಚರಂಡಿ ಮಂಡಳಿ, ಮೆಸ್ಕಾಂ, ಕಂದಾಯ ಸೇರಿದಂತೆ ಅಧಿಕಾರಿಗಳು ಆಗಮಿಸಿದ್ದರು. ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಬಂದ ವರ್ತಕ ಸಂಘ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಡಳಿತದ ಆದೇಶವನ್ನು ಖಂಡಿಸಿ ಇದುವರೆಗೆ ಇಲಾಖೆಗಳು ಕೆಲಸದ ವಿಷಯದಲ್ಲಿ ತೋರಿದ ನಿರ್ಲಕ್ಷ್ಯ ಕುರಿತು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

ಒಳಚರಂಡಿ ಹೆಸರಲ್ಲಿ 3ಕೋಟಿ ರೂ. ಮಣ್ಣು ಪಾಲಾಗಿದೆ. ಈಗ ಮತ್ತೆ ಮ್ಯಾನ್‌ಹೋಲ್ ರಚನೆಗೆ  ಅರ್ಧ ಲಕ್ಷ ಹಣ ಬಳಸುತ್ತೀರಿ. ಇದು ಯಾರ ದುಡ್ಡು? ಎಂದು ಇಲಾಖೆಯವರನ್ನು ಜನ ಪ್ರಶ್ನಿಸಿದರಲ್ಲದೆ ಈ ಕುರಿತಂತೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿಯೂ ಎಚ್ಚರಿಸಿದರು.

ಸುದೀರ್ಘ ಚರ್ಚೆಯ ನಂತರ ರಸ್ತೆ ಬಂದ್ ಮಾಡದೆ ಒಂದು ಬದಿಯಿಂದ ಕೆಲಸ ಮಾಡುವುದು, ಒಳಚರಂಡಿ ಕೆಲಸದ ಜತೆಗೆ ರಸ್ತೆ ಕೆಲಸ ಮಾಡಿ ಮತ್ತೆ ಬಾಕಿ ಉಳಿದ ಚರಂಡಿ ಕೆಲಸ ಮಾಡಲು ತೀರ್ಮಾನಿಸಲಾಯಿತು.

ರಸ್ತೆ ಬಂದ್ ವಿಚಾರಕ್ಕೆ ಸಂಬಂಧಿಸಿ ಕೆಎಸ್‌ಆರ್‌ಟಿಸಿ ಜತೆಗೂ ಚರ್ಚಿಸದ ವಿಷಯ ಸಭೆಯಲ್ಲಿ ಬೆಳಕಿಗೆ ಬಂತು. ಸಭೆಗೆ ಬಂದ ಇಲಾಖೆಯ ಅಧಿಕಾರಿಗಳು ರಸ್ತೆ ಬಂದ್ ಮಾಡಿದರೆ ಪರ್ಯಾಯ ಮಾರ್ಗದಲ್ಲಿ ಬಸ್ ಕಳುಹಿಸಬೇಕಾಗುತ್ತದೆ. ಆದರೆ ಅದಕ್ಕೆ ಸರ್ವೆ ಮಾಡಿಲ್ಲ. ಈಗ ಬಂದ್ ಅಧಿಸೂಚನೆ ಮಾತ್ರ ಬಂದಿದೆ ಎಂದರು.

ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥ್ ರಾವ್, ಧನಂಜಯ ಅಡ್ಪಂಗಾಯ, ಪಿ.ಎಸ್.ಗಂಗಾಧರ್, ಪಿ.ಬಿ.ಸುಧಾಕರ್ ರೈ, ಬಿ.ಎಸ್.ಶರೀಫ್, ಡಾ.ಎನ್.ಎ. ಜ್ಞಾನೇಶ್, ದಿನೇಶ್ ಮಡಪ್ಪಾಡಿ, ಕೆ.ಗೋಕುಲ್‌ದಾಸ್, ಭವಾನಿ ಶಂಕರ ಅಡ್ತಲೆ, ಗಣೇಶ್ ಭಟ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಪ.ಪಂ. ಅಧ್ಯಕ್ಷೆ ಸುಮತಿ ನಾರಾಯಣ, ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.