ADVERTISEMENT

ಶಾಸಕರ ಸ್ಥಾನ ಅನರ್ಹಗೊಳಿಸಿ: ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 6:35 IST
Last Updated 10 ಫೆಬ್ರುವರಿ 2012, 6:35 IST

ಪುತ್ತೂರು: `ಸಂಸ್ಕೃತಿ ಹೆಸರಿನಲ್ಲಿ ಜಿಲ್ಲೆಯ ಜನರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರು ರಾಜ್ಯದ ಮಾನ ಹರಾಜು ಮಾಡಿರುವ ಸಚಿವ ಕೃಷ್ಣ ಪಾಲೆಮಾರ್ ಅವರನ್ನು ಬೀದಿಯಲ್ಲಿ ಮೆರವಣಿಗೆ ನಡೆಸಲಿ~ ಎಂದು ಪುತ್ತೂರು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ವಿಧಾನ ಸಭಾ ಕಲಾಪ ವೇಳೆ ಅಶ್ಲೀಲಚಿತ್ರ ವೀಕ್ಷಿಸಿದ ಶಾಸಕರ ಸ್ಥಾನ ರದ್ದುಗೊಳಿಸಬೇಕೆಂದು ಆಗ್ರಹಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪುತ್ತೂರುಬಸ್ ನಿಲ್ದಾಣ ಬಳಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೃಷ್ಣ, ಲಕ್ಷ್ಮಣ ದೇವರ ಹೆಸರು ಇಟ್ಟುಕೊಂಡಿರುವ ವ್ಯಕ್ತಿಗಳು ವಿಧಾನ ಸಭಾ ಕಲಾಪ ವೇಳೆ ಬ್ಲೂಫಿಲಂ ನೋಡುವ ಮೂಲಕ ರಾಜ್ಯದ ಮಾನ ತೆಗೆಯುವ ಕೆಲಸ ಮಾಡಿದ್ದಾರೆ. ಲಜ್ಜೆಗೆಟ್ಟ ಸಚಿವರು ರಾಜ್ಯವನ್ನು ಆಳ್ವಿಕೆ ಮಾಡುತ್ತಿರುವುದು ಈ ಪ್ರಕರಣದಿಂದ ಬಹಿರಂಗಗೊಂಡಿದೆ. ಸಂಸ್ಕೃತಿಯ ಬಗ್ಗೆ ಸದಾ ಮಾತನಾಡುತ್ತಿರುವ ಸಂಘ ಪರಿವಾರದವರು , ಬಿಜೆಪಿಗರು ಹಾಗೂ ಸ್ವಾಮೀಜಿಗಳು ಈಗ ಎಲ್ಲಿದ್ದಾರೆ ಎಂದು ಅವರು ಹೇಳಿದರು.

ಹೋಟೆಲ್‌ಗಳಲ್ಲಿ ಟೀ ಕುಡಿಯುವ ವ್ಯಕ್ತಿಗಳಿಗೆ ಹಲ್ಲೆ ನಡೆಸುವ, ದನ ಸಾಗಣೆ ಕಾರಣಕ್ಕೆ ಹಲ್ಲೆ ನಡೆಸುವ ಬಜರಂಗಿಗಳು ಈ ಕುರಿತು ಮಾತನಾಡುತ್ತಿಲ್ಲ ಎಂದು ಅವರು ದೂರಿದರು.

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜೀವನ ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷೆ ಕಲಾವತಿ ರೈ,  ತಾಲ್ಲೂಕು ಪಂಚಾಯಿತಿ ಸದಸ್ಯೆ ಜೊಹರಾ ನಿಸಾರ್ ಅಹ್ಮದ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕೇಶವ ಪೂಜಾರಿ, ಪುರಸಭೆ ವಿರೋಧಪಕ್ಷ ನಾಯಕ ಎಚ್.ಮಹಮ್ಮದ್ ಆಲಿ, ಸದಸ್ಯರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶಕ್ತಿ ಸಿನ್ಹಾ, ಅನ್ವರ್ ಖಾಸಿಂ, ಸೀಮಾ ಗಂಗಾಧರ್, ಲ್ಯಾನ್ಸಿ ಮಸ್ಕರೇನ್ಹಸ್, ಪಕ್ಷದ ಮುಖಂಡರಾದ ಎಸ್.ಡಿ. ವಸಂತ, ನೂರುದ್ದೀನ್ ಸಾಲ್ಮರ, ರವಿರಾಜ್ ರೈ ಸಜಂಕಾಡಿ, ಪ್ರಸನ್ನ ಕುಮಾರ್ ರೈ, ಡಾಲ್ಪಿ ಎ.ರೇಗೊ, ವಿಜಯಕುಮಾರ್, ಸಾಬಾ ಸಾಹೇಬ್, ಶಾಬಾ ಕಬಕ, ಮುರಳೀಧರ್ ರೈ ಮಠಂತಬೆಟ್ಟು, ನಿರಂಜನ ರೈ ಮಠಂತಬೆಟ್ಟು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.