ADVERTISEMENT

‘ಸಂತೋಷವಿದ್ದರೆ ಸ್ವರ್ಗ; ತರ್ಕವಿದ್ದರೆ ನರಕ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 11:47 IST
Last Updated 31 ಡಿಸೆಂಬರ್ 2017, 11:47 IST

ಉಜಿರೆ: ಸಂತೋಷವಿದ್ದರೆ ಸ್ವರ್ಗ, ತರ್ಕವಿದ್ದರೆ ನರಕ. ತಪ್ಪು ತಿಳಿವಳಿಕೆಯಿಂದ ಮಾಡಿದ ಪಾಪದೋಷಗಳನ್ನು ಕ್ಷಮಿಸಿ, ಜಿನ ಮಂದಿರದಲ್ಲಿ ಹೊಸ ಚಿಂತನೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವುದೇ ಹೊಸ ವರ್ಷ ಆಚರಣೆಯ ಉದ್ದೇಶವಾಗಿದೆ ಎಂದು ಪ್ರಸಂಗ ಸಾಗರ ಮುನಿ ಮಹಾರಾಜರು ಹೇಳಿದರು.

ಅವರು ಭಾನುವಾರ ವೇಣೂರಿನ ಕಲ್ಲು ಬಸದಿಯಲ್ಲಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಸಾಮೂಹಿಕ ಶಾಂತಿ ಚಕ್ರ ಆರಾಧನೆ ಸಂದರ್ಭದಲ್ಲಿ ಆಶೀವರ್ಚನ ನೀಡಿದರು.

ಹೊರನಾಡು ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರು ಜಿನ ಭಕ್ತಿಗೀತೆಗಳನ್ನು ಹಾಡಿದರು. ಪುಷ್ಪದಂತ ಸಾಗರ ಮಹಾರಾಜರು, ಪ್ರಮುಖ್ ಸಾಗರ ಮಹಾರಾಜರು ಮತ್ತು ಗಿರಿನಾಥ್ ಸಾಗರ ಮಹಾರಾಜರು ಉಪಸ್ಥಿತರಿದ್ದರು.

ADVERTISEMENT

ಬಾಹುಬಲಿ ಕ್ಷೇತ್ರದಲ್ಲಿ ಪಾಪಪ್ರಕ್ಷಾಲನೆ ಹಾಗೂ ಸಾಮೂಹಿಕ ಪ್ರತಿಕ್ರಮಣ ಕಾರ್ಯಕ್ರಮ ನಡೆಯಿತು. ಜಿನ ಭಜನೆ, ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಹೊಸವರ್ಷವನ್ನು ಸ್ವಾಗತಿಸಲಾಯಿತು.

64ನೇ ಜನ್ಮ ದಿನೋತ್ಸವ ಇಂದು: ಆಚಾರ್ಯ ಪುಷ್ಪದಂತ ಸಾಗರ ಮಹಾರಾಜರ 64ನೇ ಜನ್ಮ ದಿನೋತ್ಸವವನ್ನು ಸೋಮವಾರ ಆಚರಿಸಲಾಗುತ್ತದೆ.

ಬೆಳಿಗ್ಗೆ 7 ಗಂಟೆಗೆ ಶ್ರೀ ಬಾಹುಬಲಿ ಸ್ವಾಮಿಗೆ ಪಾದಪೂಜೆ, ಅಷ್ಟವಿಧಾರ್ಚನೆ ಪೂಜೆ ನಡೆಯುತ್ತದೆ. 64 ಜೋಡಿ ಶ್ರಾವಕ-ಶ್ರಾವಕಿಯವರಿಂದ ಆಹಾರ ದಾನ, 64 ದೀಪಗಳ ಪ್ರಜ್ವಲನೆ, 64 ಜೋಡಿ ಶ್ರಾವಕ-ಶ್ರಾವಕಿಯವರಿಂದ ಮುನಿಗಳ ಪಾದಪೂಜೆ, ಶಾಸ್ತ್ರ ದಾನ, ಆರತಿ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.