ADVERTISEMENT

ಸಂಭ್ರಮದ ಆಟಿ ಅಮಾವಾಸ್ಯೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 12:15 IST
Last Updated 20 ಜುಲೈ 2012, 12:15 IST

ಮಂಗಳೂರು: ತುಳುವರು ಆಟಿ ಅಮಾವಾಸ್ಯೆಯನ್ನು ಗುರುವಾರ ಸಡಗರದಿಂದ ಆಚರಿಸಿದರು. ಮುಂಜಾನೆ ಎದ್ದು ಹಾಳೆ ಮರದ ತೊಗಟೆಯ ಕಷಾಯ ಸೇವಿಸಿದರು. ಜಿಲ್ಲೆಯ ಈಶ್ವರ ದೇವಸ್ಥಾನಗಳಲ್ಲಿ ಕೆಲವೆಡೆ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ತೀರ್ಥಕ್ಷೇತ್ರಗಳಲ್ಲಿ  ಹಾಗೂ ಸಮುದ್ರ ಕಿನರೆಯಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ಪುನೀತರಾದರು.

`ಆಟಿ ಅಮಾವಾಸ್ಯೆಯಂದು ಹಾಳೆ ಮರದ ತೊಗಟೆಯಲ್ಲಿ ವಿಶೇಷ ಔಷಧೀಯ ಮೌಲ್ಯ ಸಂಚಯನಗೊಳ್ಳುತ್ತದೆ. ಅಂದು ಅದರ ತೊಗಟೆಯಿಂದ ತಯಾರಿಸಿದ ಕಷಾಯ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ನಾನಾ ರೋಗರುಜಿನಗಳು ದೂರವಾಗುತ್ತವೆ~ ಎಂಬ ನಂಬಿಕೆ ತುಳುವರದು.

ಹಾಳೆ ಮರದ ತೊಗಟೆಯನ್ನು ಬೆಣಚು ಕಲ್ಲಿನಿಂದ ಜಜ್ಜಿ ತೆಗೆದು,  ಅದನ್ನು ಕಲ್ಲಿನಲ್ಲಿ ಕಡೆದು ರಸವನ್ನು ತೆಗೆದು, ಓಮ, ಬೆಳ್ಳುಳ್ಳಿ, ಓಮ, ಕರಿಮೆಣಸು, ಮೆಂತೆ ಇನ್ನಿತರ ಮಸಾಲೆ ಪದಾರ್ಥ ಗಳನ್ನು ಸೇರಿಸಿ ಕಷಾಯ ತಯಾರಿಸುತ್ತಾರೆ. ಅದಕ್ಕೆ ಬೋರ್ಕಲ್ಲಿನ ಒಗ್ಗರಣೆ ಹಾಕುತ್ತಾರೆ. ದೇವರಿಗೆ ಅರ್ಪಣೆ ಮಾಡಿದ ಬಳಿಕ ಮನೆಮಂದಿಗೆ ಕಷಾಯ ಕುಡಿಯಲು ಕೊಡುತ್ತಾರೆ. ನಗರದ ಕೆಲವು ಹಳೆಯ ಹೋಟೆಲ್‌ಗಳು ಗಿರಾಕಿಗಳಿಗೆ ಕಷಾಯ ಒದಗಿಸಿದವು. ತಯಾರಿಸಲು ಬಾರದವರು, ಹಾಳೆ ಮರದ ತೊಗಡೆ ಲಭ್ಯ ಇಲ್ಲದವರು ನೆರೆಕರೆಯವರಿಂದ, ಹೋಟೆಲ್‌ಗಳಿಂದ ಕಷಾಯ ಪಡೆದು ಸೇವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.