ADVERTISEMENT

‘ಸಾಧಿಸುವ ಛಲ ಇದ್ದಲ್ಲಿ ಯಶಸ್ಸು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 8:11 IST
Last Updated 17 ಜೂನ್ 2018, 8:11 IST

ಮಂಗಳೂರು: ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ಹಟ ಇದ್ದರೆ ಏನನ್ನೂ ಕೂಡ ಸಾಧಿಸಬಹುದು, ಅದಕ್ಕೆ ಬೇಕಾದುದು ಕಡಿಮೆ ಮಾತು ಮತ್ತು ಹೆಚ್ಚು ಪರಿಶ್ರಮ ಎಂದು ನಿಟ್ಟೆ ಕೆ.ಎಸ್. ಹೆಗ್ಡೆ ಮ್ಯಾನೇಜ್‍ಮೆಂಟ್ ಸಂಸ್ಥೆಯ ಟ್ರಸ್ಟಿನ ಪ್ರೊ.ಸುಧೀರ್ ರಾಜ್ ಹೇಳಿದರು.

ನಗರದ ಮಹೇಶ್ ಪಿ.ಯು ಕಾಲೇಜಿನ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಸಾಧನೆಗೆ ನೀರೆರೆದು ಪೋಷಿಸಬೇಕಾದುದು ಶಿಕ್ಷಕರ ಮತ್ತು ರಕ್ಷಕರ ಕರ್ತವ್ಯ. ‘ಶಿಕ್ಷಕ’ ಎಂದರೆ ಶಿಷ್ಟಾಚಾರವುಳ್ಳ ಕ್ಷ -ಕಿರಣದಂತಿರುವ-ಕರ್ಮಯೋಗಿ. ಆತನ ಗುಣ, ನಡತೆ, ಮಾತುಗಳೆಲ್ಲವೂ ವಿದ್ಯಾರ್ಥಿಗಳಿಗೆ ಅನುಕರಣೀಯವಾಗಿರಬೇಕು. ನುರಿತ ಶಿಕ್ಷಕನೆಂದರೆ ತಾನು ಬೋಧಿಸುವ ವಿಷಯದ ಬಗೆಗಿನ ನೈಪುಣ್ಯತೆಯನ್ನು ವಿದ್ಯಾರ್ಥಿಗೆ ಅರ್ಥವಾಗುವಂತೆ ಬೋಧಿಸುವಾತ. ಶಿಕ್ಷಕನಿಗೆ ವಿಷಯದ ಪರಿಜ್ಞಾನವಿದ್ದರೂ ವಿದ್ಯಾರ್ಥಿಗೆ ತಲು ಪಿಸಲು ಸಾಧ್ಯವಾಗದಿದ್ದರೆ ಏನೂ ಪ್ರಯೋಜನವಿಲ್ಲ. ಅಲ್ಲದೆ ಬದಲಾಗುತ್ತಿರುವ ಸಮಾಜ ಹಾಗೂ ಶಿಕ್ಷಣ ಪದ್ಧತಿಗನುಗುಣವಾಗಿ ಬೋಧಿಸದಿದ್ದಲ್ಲಿ ಆತ ಪರಿಪೂರ್ಣ ವೆನಿಸಿಕೊಳ್ಳಲಾರ’ ಎಂದರು. ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಜೀವ ನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ, ಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ವಿದ್ಯಾ ಭ್ಯಾಸದ ಹಂತದಲ್ಲಿ ಕಣ್ಣು, ಕಿವಿ, ಮೆದುಳು ಕ್ರಿಯಾಶೀಲವಾಗಿದ್ದರೆ ಪಾಠ ಪ್ರವಚನಗಳನ್ನು ಅರ್ಥೈಸಿಕೊಳ್ಳುವುದರೊಂದಿಗೆ ಸಾಧನೆ ಸಾಧ್ಯ ಎಂದರು.

ADVERTISEMENT

ಆಡಳಿತ ಮಂಡಳಿಯ ಟ್ರಸ್ಟಿ ಸುಜಿತ್ ಕುಮಾರ್ ಮಾತನಾಡಿ, ದೇಶಾದ್ಯಂತ ಶಾಖೆಗಳನ್ನೊಳಗೊಂಡ ಮಹೇಶ್ ಕಾಲೇಜು ಕರ್ನಾಟಕದಲ್ಲಿ ಮಂಗಳೂರಿನಿಂದ ಆರಂಭಗೊಂಡು ಬೀದರ್‌ವರೆಗೆ 21 ಶಾಖೆಗಳನ್ನು ಹೊಂದಿದೆ. ಇಲ್ಲಿ ದಿನನಿತ್ಯದ ಪಾಠ ಪ್ರವಚನದೊಂದಿಗೆ ವಿದ್ಯಾರ್ಥಿಗಳಿಗೆ ಜೀವನದ ಸವಾಲುಗಳನ್ನು ಎದುರಿಸುವಂತಹ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುವುದು ಎಂದರು.

ಆಡಳಿತಾಧಿಕಾರಿ ಅನಿಲ್ ಮಸ್ಕರೇನಸ್ ಶುಭ ಹಾರೈಸಿದರು. ಕಾರ್ಯನಿರ್ವಹಣಾಧಿಕಾರಿ ನರಸಿಂಹ ಭಟ್ ಸ್ವಾಗತಿಸಿದರು. ಇಂಗ್ಲಿಷ್‌ ಪ್ರಾಧ್ಯಾಪಕಿ ಸುಮತಿ ಪೈ ಮತ್ತು ಕನ್ನಡ ಪ್ರಾಧ್ಯಾಪಕ ದಿವಾಕರ್ ಬಲ್ಲಾಳ್ ನಿರೂಪಿಸಿದರು. ಶಿಕ್ಷಕ ಮಂಡಳಿಯ ಕಾರ್ಯದರ್ಶಿ ಯಶಸ್ವಿನಿ ವಂದಿಸಿದರು. ಸಂಘಟಕ ಡಾ.ಮೊಹಮ್ಮದ್ ನಸೀಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.