ADVERTISEMENT

ಸಾರಿಗೆ ರಾಷ್ಟ್ರೀಕರಣಕ್ಕೆ ಒಕ್ಕೊರಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 10:10 IST
Last Updated 21 ಅಕ್ಟೋಬರ್ 2012, 10:10 IST
ಸಾರಿಗೆ ರಾಷ್ಟ್ರೀಕರಣಕ್ಕೆ ಒಕ್ಕೊರಲ ಒತ್ತಾಯ
ಸಾರಿಗೆ ರಾಷ್ಟ್ರೀಕರಣಕ್ಕೆ ಒಕ್ಕೊರಲ ಒತ್ತಾಯ   

ಮಂಗಳೂರು: ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲು ಅವಕಾಶ ಕಲ್ಪಿಸಬೇಕು ಎಂಬ ಖಾಸಗಿ ಬಸ್ ಮಾಲೀಕರ ಬೇಡಿಕೆಗೆ ಸಾರಿಗೆ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾರಿ ವಿರೋಧ ವ್ಯಕ್ತವಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, `ಬಸ್ ಪ್ರಯಾಣ ದರ ಏರಿಸಬಾರದು. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ಅನುಭವಿಸುವ ಯಾತನೆ ತಪ್ಪಿಸಲು ಸಾರಿಗೆಯನ್ನು ರಾಷ್ಟ್ರೀಕರಣಗೊಳಿಸಬೇಕು~ ಎಂದು ಒತ್ತಾಯಿಸಿದರು.

ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಮಾತನಾಡಿ, `ಅಗತ್ಯ ವಸ್ತುಗಳ ಬೆಲೆ ಏರಿದಾಗ ಸರ್ಕಾರಿ ನೌಕರರಂತೆ ಕೂಲಿಕಾರ್ಮಿಕರು, ಕ್ಸೆರಾಕ್ಸ್ ಅಂಗಡಿ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನದಲ್ಲಿ ಹೆಚ್ಚುವುದಿಲ್ಲ. ಶೇ 15ರಷ್ಟು ಬೆಲೆ ಏರಿಸಿದರೂ ನಿತ್ಯ ಪ್ರಯಾಣಿಸುವ ಬಡ ಪ್ರಯಾಣಿಕರಿಗೆ ಮಾಸಿಕ 150 ರೂಪಾಯಿಗೂ ಅಧಿಕ ಹೊರೆ ಬೀಳುತ್ತದೆ~ ಎಂದರು.

`ಖಾಸಗಿ ಬಸ್‌ನ ಕನಿಷ್ಠ ಪ್ರಯಾಣ ದರವನ್ನು ಬೇಕಿದ್ದರೆ 10 ರೂಪಾಯಿಗೆ ಏರಿಸಲಿ. ಆದರೆ, ಖಾಸಗಿ ಬಸ್‌ಗಳು ಸಂಚರಿಸುವಲ್ಲೆಲ್ಲ ಸರ್ಕಾರಿ ಬಸ್ ಆರಂಭಿಸಿ. ಆಯ್ಕೆಯನ್ನು ಪ್ರಯಾಣಿಕರಿಗೆ ಬಿಡಿ~ ಎಂದರು. `ನಗರದ ರಸ್ತೆಗಳು ಅಗಲಗೊಂಡಿರುವುದರಿಂದ ಡಿ.ಎಂ ಅಧಿಸೂಚನೆ ರದ್ದುಗೊಳಿಸಿ ಹೆಚ್ಚು ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಬಸ್‌ಗಳ ಬೇಕಾಬಿಟ್ಟಿ ನಿಲುಗಡೆಯಿಂದ ಉಂಟಾಗುವ ವಾಹನ ದಟ್ಟಣೆ ತಡೆಯಲು ಸಾರಿಗೆ ಪೊಲೀಸರ ಸಂಖ್ಯೆ ಹೆಚ್ಚಿಸಬೇಕು~ ಎಂದು ಅವರು ಸಲಹೆ ನೀಡಿದರು.

`ಸರ್ಕಾರಿ ಬಸ್‌ಗಳ ಕನಿಷ್ಠ ಪ್ರಯಾಣ ದರ 4 ರೂಪಾಯಿ ಇದೆ. ಆದರೆ ಖಾಸಗಿ ಬಸ್‌ಗಳಲ್ಲಿ ಈಗಾಗಲೇ 5 ರೂಪಾಯಿ ಕನಿಷ್ಠ ಪ್ರಯಾಣ ದರ ಇದೆ. ಪ್ರತಿ ಬಸ್‌ನಲ್ಲಿ ಸಾಮರ್ಥ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜನರನ್ನು ತುಂಬಿಸುತ್ತಾರೆ. ಹಾಗಾಗಿ ಡೀಸೆಲ್ ಬೆಲೆ ಏರಿಕೆಯಿಂದ ಬಸ್ ಮಾಲೀಕರಿಗೆ ಯಾವುದೇ ಹೊರೆಯಾಗದು. ಪ್ರಯಾಣ ದರ ಏರಿಕೆ ಮಾಡಿ ಬಡವರಿಗೆ ಮತ್ತಷ್ಟು ಹೊಡೆತ ನೀಡಬೇಡಿ ಎಂದು ಸದಾನಂದ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.