ADVERTISEMENT

ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಂಪಾಷಷ್ಠಿ ಬ್ರಹ್ಮರಥೋತ್ಸವ ನೆರವೇರಿತು.

ಮೊದಲಿಗೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಲ್ಲಕಿ ಉತ್ಸವ ದೇವಳದ ಹೊರಾಂಗಣದಲ್ಲಿ ನೆರವೇರಿತು. ಆನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ, ವಾದ್ಯ, ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಭಕ್ತರ ಜಯಘೋಷದ ನಡುವೆ ಬೆಳಗ್ಗೆ 7.07ರ ಧನುರ್‌ಲಗ್ನದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮ ರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು.

ರೋಹಿತ ಕೇಶವ ಜೋಗಿತ್ತಾಯರು ದೇವರಿಗೆ ಸುವರ್ಣವೃಷ್ಟಿ ಮಾಡಿದರು. ಭಕ್ತರಿಗೆ ಹೂವು, ಫಲವಸ್ತು, ಪ್ರಸಾದಗಳನ್ನು ಅರ್ಚಕರು ರಥದಿಂದ ಎಸೆದರು. ಭಕ್ತರು ನಾಣ್ಯ, ಕಾಳುಮೆಣಸು, ಸಾಸಿವೆಗಳನ್ನು ರಥಕ್ಕೆ ಎಸೆದರು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಕ್ರಿಕೆಟಿಗ ಜಿ.ಆರ್ ವಿಶ್ವನಾಥ್ ಮತ್ತು ಮಾಜಿ ಧಾರ್ಮಿಕ ದತ್ತಿ ಆಯುಕ್ತ ಟಿ. ಶ್ಯಾಂ ಭಟ್ ಸೇರಿದಂತೆ ಒಟ್ಟು 52 ಮಂದಿ ಬ್ರಹ್ಮರಥೋತ್ಸವದ ಹರಕೆ ಸೇವೆ ಸಲ್ಲಿಸಿದ್ದರು. ಮಹಾಪೂಜೆ, ಅನ್ನಪ್ರಸಾದ ಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.