ADVERTISEMENT

ಸುಬ್ರಹ್ಮಣ್ಯದಲ್ಲೂ ಲೋ ವೋಲ್ಟೇಜ್ ಸಮಸ್ಯೆ!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 9:45 IST
Last Updated 23 ಫೆಬ್ರುವರಿ 2012, 9:45 IST

ಸುಬ್ರಹ್ಮಣ್ಯ: ಪ್ರತಿನಿತ್ಯ ಸಾವಿರಾರು ಯಾತ್ರಿಕರು ಭೇಟಿ ನೀಡುವ ಕುಕ್ಕೆ  ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಲೊವೋಲ್ಟೇಜ್ ವಿದ್ಯುತ್ ಸಮಸ್ಯೆ ತಲೆದೋರಿದೆ.

ಪ್ರತಿದಿನ ಕೆಲವು ಗಂಟೆಗಳ ಕಾಲ ಮಾತ್ರ ವಿದ್ಯುತ್ ದೀಪದ ಬೆಳಕು ಕಾಣುತ್ತಿದ್ದು, ಹೈಮಾಸ್ಟ್ ದೀಪಗಳು ಉರಿಯುವುದಿಲ್ಲ. ಲೋವೋಲ್ಟೇಜ್‌ನಿಂದಾಗಿ ಬಲ್ಪ್‌ಗಳು ಚಿಮಿಣಿ ದೀಪಕ್ಕಿಂತಲೂ ಕಡಿಮೆ ಬೆಳಕು ನೀಡುತ್ತ ಬೆಳಕಿನ ಕಣ್ಣಾಮುಚ್ಚಾಲೆ ಆಡುತ್ತಿವೆ. ಇದರಿಂದ  ಸುಬ್ರಹ್ಮಣ್ಯದ ನಾಗರಿಕರು ಮತ್ತು ಭಕ್ತರು ತುಂಬಾ ತೊಂದರೆಗೆ ಸಿಲುಕುವಂತಾಗಿದೆ.

ನಾಲ್ಕು ವರ್ಷದ ಹಿಂದಿನವರೆಗೂ ಕಾಡಿನ ಬೃಹತ್ ಮರ-ಗಿಡಗಳ ನಡುವೆ ಹಾದು ಬರುವ ವಿದ್ಯುತ್ ತಂತಿಗಳ ಮೂಲಕ ಸುಬ್ರಹ್ಮಣ್ಯಕ್ಕೆ ವಿದ್ಯುತ್ ಸರಬರಾಜು ಆಗುತ್ತಿತ್ತು. ಮರಗಳು ತಂತಿ ಮೇಲೆ ಬೀಳುತ್ತಿದ್ದುದರಿಂದ ಸುಬ್ರಹ್ಮಣ್ಯದಲ್ಲಿ ಆಗಾಗ ವಿದ್ಯುತ್ ಕೈಕೊಡುತ್ತಿತ್ತು.

ಇದರಿಂದ ಬೇಸತ್ತ  ಜನತೆ ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ ಹೋರಾಟ ನಡೆಸಿದ್ದರು. ಅದರ ಫಲವಾಗಿ ಕಡಬದಿಂದ ಸುಬ್ರಹ್ಮಣ್ಯಕ್ಕೆ ನೇರ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಲೈನ್ ಎಳೆಯಲಾಯಿತು. ವೋಲ್ಟೇಜ್ ವ್ಯತ್ಯಯ ತಪ್ಪಿಸಲು ಕುಲ್ಕುಂದದಲ್ಲಿ ಬೂಸ್ಟರ್ ಅಳವಡಿಸಲಾಯಿತು. ಇದರಿಂದ ಕಳೆದ 4 ವರ್ಷಗಳಿಂದ ಉತ್ತಮ ಗುಣಮಟ್ಟದ ನಿರಂತರ ವಿದ್ಯುತ್ ಸಂಪರ್ಕ ದೊರೆತಿತ್ತು

ಸುಬ್ರಹ್ಮಣ್ಯಕ್ಕೆ ಎಕ್ಸ್‌ಪ್ರೆಸ್ ಲೈನ್ ಅಳವಡಿಸಿದ್ದರಿಂದ ಮೆಸ್ಕಾಂಗೆ ಉತ್ತಮ ವರಮಾನವೂ ಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದಿನಕ್ಕೆ ಕೇವಲ 4-5 ಗಂಟೆಗಳ ಕಾಲ ಮಾತ್ರ ಪೂರ್ಣ ಪ್ರಮಾಣದ ವಿದ್ಯುತ್ ಸಿಗುತ್ತಿದೆ. ಮಿಕ್ಕ ಅವಧಿಯಲ್ಲಿ ಚಿಮಿಣಿ ದೀಪದ ಬೆಳಕಿಗಿಂತಲೂ ಮಂದ ವಿದ್ಯುತ್ ಬೆಳಕು. ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಶಿನ್ ಯಾವುದೂ ಚಾಲೂ ಆಗುತ್ತಿಲ್ಲ.

ಕುಲ್ಕುಂದದಲ್ಲಿದ್ದ ಬೂಸ್ಟರ್ ಕೆಟ್ಟು ಹೋಗಿದೆ. ಮೆಸ್ಕಾಂ ಅದರ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಹೇಳಲಾಗಿದೆ. ಕಡಬದಿಂದ ಸುಬ್ರ ಹ್ಮಣ್ಯಕ್ಕೆ ನೇರವಾಗಿ ಬರುತ್ತಿದ್ದ ವಿದ್ಯುತ್‌ಲೈನ್‌ಗಳಿಂದ ಅಲ್ಲಲ್ಲಿ ಅನೇಕ ವಾಣಿಜ್ಯ ವ್ಯವಹಾರಗಳಿಗೆ ಹಾಗೂ ಇನ್ನಿತರ ಸಂಸ್ಥೆಗಳಿಗೆ ವಿದ್ಯುತ್ ನೀಡಲಾಗುತ್ತಿದೆ. ಹಾಗಾಗಿ ಸುಬ್ರಹ್ಮ ಣ್ಯಕ್ಕೆ ಬರುವಾಗ ವಿದ್ಯುತ್ ಶಕ್ತಿ ಕುಂಠಿತವಾಗುತ್ತಿದೆ. ಯಾತ್ರಾ ಕೇಂದ್ರವಾದ ಸುಬ್ರಹ್ಮಣ್ಯ ಕ್ಕಾಗಿಯೇ ಅಳವಡಿಸಲಾದ ಈ ವಿದ್ಯುತ್ ಸಂಪರ್ಕವನ್ನು ಪರಿಸರದ ಕೃಷಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 30 ಕಿ.ಮೀ ದೂರದ ಗ್ರಾಮೀಣ ಪ್ರದೇಶದವರೆಗೂ  ವಿಸ್ತರಿಸಲಾಗಿದೆ.

ಸಾವಿರಾರು ಭಕ್ತರ ಹಿತದೃಷ್ಟಿಯಿಂದ ಸುಬ್ರಹ್ಮಣ್ಯಕ್ಕೆ ಅಳವಡಿಸಲಾದ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಸದ್ಯ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.