ADVERTISEMENT

ಸೇವಾ ತತ್ಪರತೆ ಹೊಂದಲು ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 6:34 IST
Last Updated 18 ಜೂನ್ 2013, 6:34 IST

ಮಂಗಳೂರು: ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯು ಮಾರಾಟ ಅಧಿಕಾರಿಗಳಿಗೆ ಬಹಳ  ಮಹತ್ವದ್ದಾಗಿದೆ ಎಂದು ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ವಿಶಾಲ್ ಹೆಗ್ಡೆ ಅವರು ಐಸಿಐಸಿಐ ಬ್ಯಾಂಕಿನ ಮಾರಾಟ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಅವರು ದೇರಳಕಟ್ಟೆಯ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್‌ನಲ್ಲಿ ನಡೆದ 26 ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತಮ್ಮ ದೈನಂದಿನ ಕೆಲಸದ ದಿನಚರಿಯನ್ನು ದಾಖಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಅವರು ತಿಳಿಸಿದರು.

ಸಂಸ್ಥೆ ನಿರ್ದೇಶಕ ಡಾ.ಎಂ.ಎಸ್.ಮೂಡಿತ್ತಾಯ ಅವರು, ಪ್ರಾಸ್ತಾವಿಕ ಭಾಷಣದಲ್ಲಿ ಮಾರಾಟ ಕ್ಷೇತ್ರದ ಸವಾಲುಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ನಿಟ್ಟೆ ಸಂಸ್ಥೆಯು ಅಧಿಕಾರಿಗಳಿಗೆ ಉತ್ತಮ ತರಬೇತಿ ಕೊಟ್ಟು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಒದಗಿಸಿದೆ ಎಂದರು.

ಸಿಂಡಿಕೇಟ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಎನ್.ಕೆ. ತಿಂಗಳಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂದು ಬಹಳಷ್ಟು ಸಂಖ್ಯೆಯ ಜನರು ಬ್ಯಾಂಕಿಂಗ್ ಸೌಲಭ್ಯ ವಂಚಿತರು ಇದ್ದ ಅವರಿಗೆ ಸೌಲಭ್ಯ ಒದಗಿಸುವ ಗುರುತರ ಜವಾಬ್ದಾರಿ ಬ್ಯಾಂಕ್ ಅಧಿಕಾರಿಗಳ ಮೇಲಿದೆ ಎಂದು ಅವರು ಹೇಳಿದರು.

ಐಸಿಐಸಿಐ ಮಂಗಳೂರು ಇದರ ಪ್ರಾದೇಶಿಕ ಪ್ರಬಂಧಕ ಪ್ರವೀಣ್ ಅಂಚನ್ ಅಧಿಕಾರಿಗಳಿಗೆ ತಮ್ಮ ಅನುಭವವನ್ನು ತಿಳಿಸಿದರು. ಕೆ.ಅರ್.ನಾಯಕ್ ಸ್ವಾಗತಿಸಿದರು. ಎಂ.ಎಸ್.ರಾವ್ ವಂದಿಸಿದರು. ಸೋನಾ ರೈ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.