ADVERTISEMENT

‘ಹಲವು ದಿನಗಳ ಕನಸು ನನಸಾಯಿತು...’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 4:52 IST
Last Updated 26 ಡಿಸೆಂಬರ್ 2017, 4:52 IST

ಮಂಗಳೂರು: ಕಡಲ ಕಿನಾರೆ, ದೇವಾಲಯ, ಉದ್ಯಾನ, ಹೀಗೆ ಹೊರ ಜಗತ್ತೊಂದು ತೆರೆದುಕೊಂಡಿತ್ತು. ಪುನರ್ವತಿ ಕೇಂದ್ರದಲ್ಲಿಯೇ ಕಾಲ ಕಳೆಯುತ್ತಿದ್ದ ಎಂಡೋಸಲ್ಫಾನ್ ಸಂತ್ರಸ್ತರು ನಗರದ ವಿವಿಧೆಡೆ ಭೇಟಿ ನೀಡುವ ಮೂಲಕ ಪಿಕ್‌ನಿಕ್‌ ಮಜವನ್ನು ಅನುಭವಿಸಿದರು.

ಕೊಕ್ಕಡ ಮತ್ತು ಕೊಯಿಲದಲ್ಲಿರುವ ಪುನರ್ವಸತಿ ಕೇಂದ್ರದ ಎಂಡೋ ಪೀಡಿತರಿಗಾಗಿ ಸೇವಾ ಭಾರತಿ ಹಾಗೂ ರೇಂಜರ್ಸ್‌ ಮತ್ತು ರೋವರ್ಸ್‌ ವತಿಯಿಂದ ವಿಹಾರವನ್ನು ಆಯೋಜಿಸಲಾಗಿತ್ತು. ನಗರದ ತಣ್ಣೀರುಬಾವಿ ಬೀಚ್‌, ಸುಲ್ತಾನ್‌ ಬತ್ತೇರಿ, ಕುದ್ರೋಳಿ ಗೋಕರ್ಣನಾಥ ದೇವಾಲಯಗಳಿಗೆ ಭೇಟಿ ನೀಡಿದ ಅವರು, ಹೊರ ಜಗತ್ತಿನೊಂದಿಗೆ ಬೆರೆತು ಸಂಭ್ರಮಿಸಿದರು.

ಇದೇ ಮೊದಲ ಬಾರಿಗೆ ಬೀಚ್‌ ನೋಡಿದ ಸಂತಸ ಅವರಲ್ಲಿ ಮನೆ ಮಾಡಿತ್ತು. ಸತ್ಯಜೀತ್, ನಾರಾಯಣ್, ತುಳಸಿ, ನವೀನ್, ಸದತ್‌, ರಶೀದ್‌ ಸೇರಿದಂತೆ ಹಲವರು ಸಂತಸ ಹಂಚಿಕೊಂಡರು.

ADVERTISEMENT

ಎಂಡೋ ಪೀಡಿತ ವಿದ್ಯಾ ಅವರ ತಾಯಿ ರಾಜೀವಿ ಹಾಗೂ ಪ್ರದೀಪ್ ಅವರ ತಾಯಿ ರೇವತಿ ಮಾತನಾಡಿ, ‘ನಮ್ಮ ಮಕ್ಕಳು ಇತರರಂತೆ ಶಾಲೆಗೆ ಹೋಗಲು ಆಗುವುದಿಲ್ಲ. ಹೊರಗಿನ ಜಗತ್ತನ್ನು ನೋಡುವುದು ಅಪರೂಪ. ಅಂತಹ ಮಕ್ಕಳಿಗೆ ಮಂಗಳೂರು ಪ್ರವಾಸ ಒಂದು ಅದ್ಭುತ ಅನುಭವ ನೀಡಿದೆ. ಇದು ಅವರ ಜೀವನದಲ್ಲಿ ಮರೆಲಾರದ ಸಂಗತಿ’ ಎಂದು ತಿಳಿಸಿದರು.

ಮೊದಲು ತಣ್ಣೀರು ಬಾವಿ ಬೀಚ್‌ಗೆ ತೆರಳಿದ ಮಕ್ಕಳು, ನಂತರ ಬೋಟ್‌ ಮೂಲಕ ಸುಲ್ತಾನ್‌ ಬತ್ತೇರಿಗೆ ಭೇಟಿ ನೀಡಿದರು. ನಂತರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಬಂದು, ಊಟ ಮಾಡಿದರು.

ಕಲ್ಪ ಟ್ರಸ್ಟ್‌ನ ಸ್ವಯಂ ಸೇವಕರು, ಕಾವೂರಿನ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್‌ ಮತ್ತು ರೋವರ್ಸ್‌ ತಂಡದ ಸದಸ್ಯರು, ಕೊಕ್ಕಡ, ಕೊಯಿಲ ಪುನರ್ವಸತಿ ಕೇಂದ್ರದ ವ್ಯವಸ್ಥಾಪಕರು ಸಹಕಾರ ನೀಡಿದರು.

ಎಂಡೋಸಲ್ಫಾನ್ ನೋಡಲ್ ಅಧಿಕಾರಿ ಡಾ. ಅರುಣ್, ಸಾಜುದ್ದೀನ್, ಸೇವಾ ಭಾರತಿ ಟ್ರಸ್ಟ್‌ನ ಸುಮತಿ ಶೆಣೈ, ವಿನೋದ್ ಶೆಣೈ, ನಾಗರಾಜ್ ಭಟ್, ಶಾಂತಾರಾಮ್‌ ಪೈ, ಕಲ್ಪ ಟ್ರಸ್ಟ್‌ನ ಪ್ರಮೀಳಾ ರಾವ್‌ ಇದ್ದರು.

* * 

‘ಬೀಚ್‌ಗೆ ಹೋಗಬೇಕು ಎನ್ನುವ ಹಂಬಲ ಹಲವು ದಿನಗಳಿಂದ ಇತ್ತು. ಅದು ಇಂದು ನನಸಾಗಿದೆ. ಇದೇ ಮೊದಲ ಬಾರಿಗೆ ಬೀಚ್ ನೋಡುತ್ತಿದ್ದೇನೆ’
ಅಭಿಷೇಕ್‌
ಎಂಡೋ ಪೀಡಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.