ADVERTISEMENT

ಹೆಂಗವಳ್ಳಿ: ಸರ್ಕಾರಿ ಸ್ಥಳ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 8:50 IST
Last Updated 16 ಆಗಸ್ಟ್ 2012, 8:50 IST

ಹೆಂಗವಳ್ಳಿ (ಸಿದ್ದಾಪುರ): ಹೆಂಗವಳ್ಳಿ ಗ್ರಾಮದ ಮರೂರು ಸಮೀಪದ ಕ್ಯಾದಿಕೊಡ್ಲು ಹಾಗೂ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದಲ್ಲಿ ಮೀಸಲು ಅರಣ್ಯ ವಿಭಾಗಕ್ಕೆ ಹೊಂದಿಕೊಂಡ 20 ಎಕರೆಗೂ ಮಿಕ್ಕಿದ ಸರ್ಕಾರಿ ಸ್ಥಳವನ್ನು ಕೇರಳ ಮೂಲದ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿರುವುದಾಗಿ ಸೋಮವಾರ  ಹೆಂಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಕ್ಯಾದಿಕೊಡ್ಲು ಪರಿಸರದ ನಾಗರಿಕರು ಆರೋಪಿಸಿ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿದರು.

ಹತ್ತಕ್ಕೂ ಹೆಚ್ಚಿನ ಕುಟುಂಬಗಳು ಹಿಂದಿನಿಂದಲೂ ಮನೆ ಹಾಗೂ ಕೃಷಿ ಮಾಡಿಕೊಂಡು ನಿತ್ಯ ಜೀವನ ನಡೆಸುತ್ತಿದ್ದಾರೆ. ಇವರು ತಮ್ಮ ಕೃಷಿ ಭೂಮಿಗೆ ಹೊಂದಿಕೊಂಡ ಸರ್ಕಾರಿ ಸ್ಥಳದಿಂದ ಜಾನುವಾರುಗಳನ್ನು ಮೇಯಿಸಲು ಅನುಕೂಲವಾಗಿತ್ತು. ಇತ್ತೀಚೆಗೆ ಹೆಂಗವಳ್ಳಿ ಗ್ರಾಮದ ಸರ್ವೆ ನಂಬ್ರ 13/1 ರಲ್ಲಿ ಅಂದಾಜು 8 ಎಕರೆ ಪಟ್ಟಾ ಸ್ಥಳವನ್ನು ಕೇರಳ ಮೂಲದ ಜೋಯ್ ಬಿನ್ ಜಾನ್ ಎನ್ನುವವರು ಖರೀದಿಸಿರುತ್ತಾರೆ.

ಅವರು ಪಟ್ಟ ಸ್ಥಳಕ್ಕೆ ಹೊಂದಿಕೊಂಡ ಮೀಸಲು ಅರಣ್ಯ ವಿಭಾಗಕ್ಕೆ ಹೊಂದಿಕೊಂಡ 20 ಎಕರೆಗೂ ಮಿಕ್ಕಿದ ಸರ್ಕಾರಿ ಸ್ಥಳವನ್ನು ಜೆಸಿಬಿ ಯಂತ್ರ ಬಳಸಿ ಸರ್ಕಾರಿ ಸ್ಥಳದಲ್ಲಿದ್ದ ಬೆಲೆ ಬಾಳುವ ಮರಮಟ್ಟುಗಳನ್ನು ನಾಶ ಮಾಡಿ, ರಬ್ಬರ್ ಗಿಡಗಳನ್ನು ನೆಡಲು ತಯಾರಿ ನಡೆಸಿ, ಹಿಂದಿನಿಂದಲೂ ಈ ಭಾಗಗಳ ಜನರಿಗೆ ಉಪಯೋಗವಾಗುತ್ತಿದ್ದ ಸರ್ಕಾರಿ ಸ್ಥಳ ಹಾಗೂ ದಾರಿಯನ್ನು ಮುಚ್ಚಿದ್ದಾರೆ. ಸ್ಥಳಕ್ಕೆ ಹೊಂದಿಕೊಂಡ ಸರ್ಕಾರಿ ಸ್ಥಳದಲ್ಲಿದ್ದ ಬೆಲೆ ಬಾಳುವ ಮರಮಟ್ಟುಗಳನ್ನು ನಾಶ ಮಾಡುವುದರೊಂದಿಗೆ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಇಲ್ಲಿ ಅನಧಿಕೃತವಾಗಿ ಸರ್ಕಾರಿ ಸ್ಥಳದ ದುರುಪಯೋಗವಾಗುತಿದ್ದರೂ ಯಾವುದೇ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಳ್ಳದಿರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರಿ ಸ್ಥಳ ಅಕ್ರಮಣದ ಕುರಿತು ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ದೂರು ನೀಡಲಾಗುವುದು.
ಸಂಬಂಧಿಸಿದವರು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೆಂಗವಳ್ಳಿ ಗ್ರಾಮದ ಕ್ಯಾದಿಕೊಡ್ಲು ನಿವಾಸಿಗಳು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.