ADVERTISEMENT

‘ಕೊಳೆರೋಗ: ಕೇಂದ್ರದ ಜತೆ ಚರ್ಚೆ’

ಮಾಜಿ ಪ್ರಧಾನಿ ದೇವೇಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 9:46 IST
Last Updated 19 ಸೆಪ್ಟೆಂಬರ್ 2013, 9:46 IST

ಮಂಗಳೂರು: ‘ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಕೊಳೆರೋಗದಿಂದಾಗಿ ಅಡಿಕೆ ಬೆಳೆಗಾರರು ಭಾರಿ ನಷ್ಟ ಅನುಭವಿಸಿರುವುದು ಗಮನಕ್ಕೆ ಬಂದಿದೆ. ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಜತೆ ಚರ್ಚಿಸುತ್ತೇನೆ’ ಎಂದು ಜನತಾದಳ (ಜಾತ್ಯತೀತ) ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಭರವಸೆ ನೀಡಿದ್ದಾರೆ.

ಇಲ್ಲಿನ ಸರ್ಕಿಟ್‌ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಳೆರೋಗದಿಂದಾಗಿ ಅಡಿಕೆ ಬೆಳೆಗಾರರು ಈಗಾಗಲೇ ಮೂರನೇ ಒಂದರಷ್ಟು ಬೆಳೆಯನ್ನು ಕಳೆದುಕೊಂಡಿದ್ದಾರೆ. ನಿರ್ವಹಣೆಯ ವೆಚ್ಚ ಜಾಸ್ತಿಯಾಗಿದೆ. ಅಡಿಕೆ ಬೆಲೆಯಲ್ಲೂ ಸ್ಥಿರತೆ ಇಲ್ಲ. ರಾಜ್ಯ ಸರ್ಕಾರವೂ ಅಡಿಕೆ ಬೆಳೆ ನಷ್ಟಕ್ಕೆ ಪರಿಹಾರ ಘೋಷಿಸಿದೆಯಾದರೂ, ಅದು ಏನೇನೂ ಸಾಲದು. ಈ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಎಲ್ಲಾ ಸಮಸ್ಯೆಗಳಿಗೆ ಪ್ರತಿಭಟನೆಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಕೃಷಿ ಸಚಿವರು ಆತ್ಮೀಯರಾಗಿರುವುದರಿಂದ ಅವರಿಗೆ ಸಮಸ್ಯೆಯ ಗಂಭೀರತೆ ಬಗ್ಗೆ ಮನವರಿಕೆ ಮಾಡಿಕೊ­ಡುತ್ತೇವೆ. ಗೋರಖ್‌ ಸಿಂಗ್‌ ವರದಿಯನ್ನು ಅನುಷ್ಠಾನಗೊಳಿ­ಸುವಂತೆ ಒತ್ತಾಯಿಸುತ್ತೇನೆ’ ಎಂದರು.

ಕರಾವಳಿಯಲ್ಲಿ ಬಲವರ್ಧನೆ: ‘ಕರಾವಳಿಯ ಜನರು ಒಂದು ಕಾಲದಲ್ಲಿ ಜನತಾದಳದ ಮೂವರನ್ನು ಗೆಲ್ಲಿಸಿ ಪಕ್ಷಕ್ಕೆ ಶಕ್ತಿ ತುಂಬಿ­ದ್ದರು. ಬಳಿಕ ಪಕ್ಷ ಎಡವಿತೋ ಅಥವಾ ನಾನು ಎಡವಿ­ದೆನೋ ಗೊತ್ತಿಲ್ಲ. ಅನೇಕ ನಿಷ್ಠಾವಂತ ಕಾರ್ಯಕರ್ತರು ಮುನಿಸಿಕೊಂಡು ತಟಸ್ಥರಾಗಿ ಉಳಿದಿದ್ದಾರೆ. ಅವರ ಮನವೊ­ಲಿಸಿ ಮತ್ತೆ ಪಕ್ಷದಲ್ಲಿ ಸಕ್ರಿಯರಾಗುವಂತೆ ಮಾಡಲು ಯತ್ನಿಸುತ್ತೇನೆ’ ಎಂದರು.

‘ಸೇನೆಯಲ್ಲಿರುವ ಜಾತ್ಯತೀತ ವ್ಯವಸ್ಥೆ ಬಗ್ಗೆ ಮೋದಿಯ ಹೇಳಿಕೆಯನ್ನು ದೊಡ್ಡದಾಗಿ ಬಿಂಬಿಸಲಾಗಿದೆ. ಸೇನೆಯಂತಹ ಭದ್ರತಾ ಸಂಸ್ಥೆಯಲ್ಲಿ ಜಾತ್ಯತೀತತೆ ಇಲ್ಲದಿದ್ದರೆ, ಬೇರೆ ಎಲ್ಲಿ ಇರಲು ಸಾಧ್ಯ? ದೇಶದ ಆಂತರಿಕ ವ್ಯವಸ್ಥೆಯಲ್ಲಿ ಜಾತ್ಯತೀತತೆ ಇಲ್ಲದಿದ್ದರೆ ಶಾಂತಿ ಸೌಹಾರ್ದವನ್ನು ಹೇಗೆ ನಿರೀಕ್ಷಿಸುತ್ತೀರಿ’ ಎಂದು ಅವರು ಪ್ರಶ್ನಿಸಿದರು.

‘ಪ್ರಧಾನಿಯಾಗಿದ್ದಾಗ ಪ್ರತಿ ಕೆ.ಜಿಗೆ ₨ 3ರಂತೆ 10 ಕೆ.ಜಿ ಅಕ್ಕಿ, ₨2ರಂತೆ 5 ಕೆ.ಜಿ. ಗೋಧಿ ಹಾಗೂ ಲೀಟರ್‌ಗೆ ₨3ರಂತೆ ಸೀಮೆಎಣ್ಣೆಯನ್ನು 36 ಕೋಟಿ ಜನರಿಗೆ ಪಡಿತರ ವ್ಯವಸ್ಥೆ ಮೂಲಕ ವಿತರಿಸಲು ಕ್ರಮ ಕೈಗೊಂಡಿದ್ದೆ. ಕಾಂಗ್ರೆಸ್‌ ಸರ್ಕಾರ ಈಗ ಆಹಾರ ಭದ್ರತಾ ಕಾಯ್ದೆ ಹೆಸರಿನಲ್ಲಿ ಪ್ರಚಾರ ಗಿಟ್ಟಿಸುತ್ತಿದೆ. ಹಾಗಾದರೆ ಇಷ್ಟೆಲ್ಲಾ ಪಂಚ ವಾರ್ಷಿಕ ಯೋಜನೆಗಳ ಸಾಧನೆ ಏನು?’ ಎಂದು ಅವರು ಪ್ರಶ್ನಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಮಾತನಾಡಿ, ‘ರಾಜ್ಯದಲ್ಲಿ 16 ಸ್ಥಾನಗಳನ್ನು ಜೆಡಿಎಸ್‌ ಗೆಲ್ಲಲಿದೆ’ ಎಂದರು.
ಚೀನಾ ಗಡಿ ಆಕ್ರಮಿಸಿದಾಗ ಹಾಗೂ ಪಾಕಿಸ್ತಾನ ಭಾರತೀಯ ಯೋಧರ ಶಿರಚ್ಛೇದ ನಡೆಸಿದಾಗ ಕೇಂದ್ರ ಸರ್ಕಾರ ಮೌನ ವಹಿಸಿದ್ದನ್ನು ಟೀಕಿಸಿದ ಅವರು ‘ನಮ್ಮ ದೇಶ ಇಷ್ಟೊಂದು ದುರ್ಬಲವಾಯಿತೇ?’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸದಾಶಿವ, ಮಾಜಿ ಉಪಸಭಾಪತಿ ಡೇವಿಡ್‌ ಸಿಮೆಯೋನ್‌, ಪಾಲಿಕೆ ಸದಸ್ಯರಾದ ಅಬ್ದುಲ್‌ ಅಜೀಜ್‌, ರಮಿಜಾ ನಾಸಿರ್‌, ಮುಖಂಡರಾದ ಮಹ್ಮದ್‌ ಕುಂಞಿ, ವಸಂತ ಪೂಜಾರಿ, ಸುಶೀಲ್‌ ನೊರೊನ್ಹ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.