ADVERTISEMENT

‘ಮಂಗಳ ಯಾನದ ಹಿಂದೆ ಇದೆ ಸಂಸ್ಕೃತ ಭಾಷೆಯ ಶಕ್ತಿ’

ನೀರ್ಚಾಲ್‌ನಲ್ಲಿ ಇಸ್ರೊ ಅಧ್ಯಕ್ಷ ಡಾ.ರಾಧಾಕೃಷ್ಣನ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:07 IST
Last Updated 21 ಡಿಸೆಂಬರ್ 2013, 4:07 IST

ಬದಿಯಡ್ಕ: ’ಸಂಸ್ಕೃತ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿದ ವಿಚಾರಗಳನ್ನು ಸಾಕಾರ­ಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಯತ್ನಿ­ಸುತ್ತಿದೆ. ಮಂಗಳ ಯಾನ ಯಶಸ್ಸಿನೊಂದಿಗೆ ಭಾರತವು ವಿಶ್ವದಲ್ಲೇ ವಿಶೇಷ ಗೌರವಕ್ಕೆ ಪಾತ್ರವಾಗಲಿದೆ. ಭಾರತದ ಭಾಷಾ ವೈವಿಧ್ಯವನ್ನು ಕಲಿತುಕೊಳ್ಳಲು ಸಂಸ್ಕೃತದ ಜ್ಞಾನ ಅಗತ್ಯ. ಮಂಗಳ ಯಾನದ ಹಿಂದೆ ಸಂಸ್ಕೃತ ಭಾಷೆಯ ಶಕ್ತಿ ಇದೆ’ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.­ರಾಧಾಕೃಷ್ಣನ್ ಹೇಳಿದರು.

ಅವರು ಇಲ್ಲಿಗೆ ಸಮೀಪದ ನೀರ್ಚಾಲ್‌ನ ಮಹಾ­ಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಸಮೂಹ ಸಂಸ್ಥೆಗಳ ಶತಮಾನೋತ್ಸವ ಕಟ್ಟಡವನ್ನು ಶುಕ್ರ­ವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

’ಸಮೂಹ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ನೀಡ­ಬೇಕು. ಬದುಕಿಗೆ ಜ್ಞಾನ ನೀಡುವ ಶಿಕ್ಷಣ ಇಂದಿಗೂ ಅಗತ್ಯ. ಭಾರತದ ಶಿಕ್ಷಣದ ಬೆಳವಣಿಗೆ­ಯಲ್ಲಿ ಸಂಸ್ಕೃತದ ಸಹಕಾರ ಬಹಳಷ್ಟಿದೆ’ ಎಂದರು..

ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಚೆನ್ನೈನ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕಿ ಪ್ರೀತಾ ರೆಡ್ಡಿ  ವಹಿಸಿದ್ದರು. ಕೊಯಮತ್ತೂರು ಆರ್ಯವೈದ್ಯ ಫಾರ್ಮಸಿ ವ್ಯವಸ್ಥಾಪಕ ನಿರ್ದೇಶಕ  ಕೆ.ಕೃಷ್ಣಕುಮಾರ್, ತಿರುವನಂತಪುರದ ಶಿಕ್ಷಣ ಇಲಾಖಾ ಅಧಿಕಾರಿ ಎಂ.ಶರೀಫ್, ಇಸ್ರೊ ಅಧಿಕಾರಿ ಗಣೇಶ್ ರಾಜ್ ಕಾಸರಗೋಡು ಇದ್ದರು.  ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಅವರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಖಂಡಿಗೆ ಗೋವಿಂದ ಭಟ್ಟರು ಧ್ವಜಾರೋಹಣ ಮಾಡಿದರು. ಮಹಾಲಿಂಗೇಶ್ವರ ಭಟ್‌ ಸ್ವಾಗ­ತಿಸಿ­ದರು. ಸಭೆಯಲ್ಲಿ ಐ.ವಿ ಭಟ್‌, ಜಯದೇವ ಖಂಡಿಗೆ, ಪಿ.ಶಂಕರ ಭಟ್, ಪತಂಜಲಿ ಖಂಡಿಗೆ  ಇದ್ದರು. ಕಾರ್ಯಕ್ರಮ­ದಲ್ಲಿ ಬಿ.ಎಂ ಸುಬ್ರಾಯ ಭಟ್‌, ಡಾ.ಖಂಡಿಗೆ ಸುಬ್ರಹ್ಮಣ್ಯ ಭಟ್, ಯು.­ರವಿಕೃಷ್ಣ, ಪಿ.­ಗೋವಿಂದ ಭಟ್‌, ರವಿಶಂಕರ ದೊಡ್ಡಮಾಣಿ ಇದ್ದರು.

ಶತಮಾನೋತ್ಸವದ ಉದ್ಘಾಟನೆಯನ್ನು ಶಾಸಕ ಎನ್ ಎ ನೆಲ್ಲಿಕುಂಜೆ ನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ. ಶ್ಯಾಮಲಾದೇವಿ ಸಹಿತ ವಿವಿಧ ರಾಜಕೀಯ ಮುಖಂಡರು ಭಾಗವ ಹಿಸಿದ್ದರು. ವಸ್ತು ಪ್ರದರ್ಶನ ವಿಭಾಗವನ್ನು ಬದಿಯಡ್ಕ ಗ್ರಾಪಂ ಸದಸ್ಯೆ ಸೌಮ್ಯ ಮಹೇಶ್‌ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.