ADVERTISEMENT

ಸಿಡಿಲಿನ ಆಘಾತ: ದಂಪತಿ ಸಾವು– ಪುತ್ರಿ ಅನಾಥೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:56 IST
Last Updated 5 ಏಪ್ರಿಲ್ 2019, 19:56 IST
ದುರ್ಘಟನೆ ನಡೆದ ಸಂಜೀವ ಮೂಲ್ಯರ ಮನೆ
ದುರ್ಘಟನೆ ನಡೆದ ಸಂಜೀವ ಮೂಲ್ಯರ ಮನೆ   

ಬೆಳ್ತಂಗಡಿ: ಗುಡುಗು, ಸಿಡಿಲಿನಿಂದ ಕೂಡಿದ ಮಳೆ ಬರುತ್ತಿದ್ದಾಗ ಅಧಿಕ ಪ್ರಮಾಣದ ವಿದ್ಯುತ್ ಹರಿದು ಅರ್ಥ್‌ ವಯರ್‍ನ ವಿದ್ಯುತ್ ಶಾಕ್‍ನಿಂದ ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಕೊಕ್ರಾಡಿ ಗ್ರಾಮದ ಪಾಡಿ ಬನತ್ಯರಡ್ಡ ಮನೆ ಸಂಜೀವ ಮೂಲ್ಯ (61) ಹಾಗೂ ಅವರ ಪತ್ನಿ ಸರೋಜಿನಿ (44) ಮೃತಪಟ್ಟವರು. ಮನೆಯಲ್ಲಿದ್ದ ಪುತ್ರಿ ಅಶ್ವಿತಾ ಹಾಗೂ ಸಂಬಂಧಿ ಯುವಕ ಸುಜಿತ್ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ತಡರಾತ್ರಿ ಸಣ್ಣದಾಗಿ ಗುಡುಗು ಮಿಶ್ರತ ಮಳೆ ಬರುತ್ತಿದ್ದ ಸಮಯದಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿತ್ತು. ವಿದ್ಯುತ್ ಒಮ್ಮೆಲೆ ಬಂದ ವೇಳೆ ಮನೆಯಲ್ಲಿನ ಸ್ವಿಚ್ ಬೋರ್ಡ್‍ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೀಡಿ ಕಟ್ಟುತ್ತಿದ್ದ ಸರೋಜಿನಿ ಏನಾಗುತ್ತಿದೆ ಎಂದು ತೋಚದೆ ಪ್ಯೂಸ್ ತೆಗೆಯಲು ವಿದ್ಯುತ್‌ ಸಂಚಾರ ಆಗಿದ್ದನ್ನು ಕಂಡು ಮನೆ ಕಿರು ಬಾಗಿಲ ಮೂಲಕ ಹೊರಗೆ ಓಡಿದ್ದಾರೆ. ಮನೆಯ ಅಂಗಳದಲ್ಲಿದ್ದ ಅರ್ಥ್ ವಯರ್‍ನಿಂದ ವಿದ್ಯುತ್ ಶಾಕ್‍ಗೆ ಒಳಪಟ್ಟು ಅಲ್ಲೇ ಬಿದಿದ್ದಾರೆ. ಈ ವೇಳೆ ಆಗಷ್ಟೆ ಮಲಗಿದ್ದ ಸಂಜೀವ ಮೂಲ್ಯರು ಪತ್ನಿ ಬೊಬ್ಬೆ ಕೇಳಿ ಪತ್ನಿ ರಕ್ಷಣೆಗೆ ಧಾಸಿದಿದ್ದಾರೆ. ಅವರು ಕೂಡಾ ವಿದ್ಯುತ್ ಶಾಕ್‍ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಪುತ್ರಿ ಅಶ್ಚಿತಾ ಹಾಗೂ ಸಂಬಂಧಿ ಸುಜಿತ್ ಮನೆ ಮುಂಬಾಗಿಲಿನಿಂದ ಹೊರಗಡೆ ಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಮನೆ ಸ್ವಿಚ್ ಬೋರ್ಡ್ ಹಾಗೂ ವಯರಿಂಗ್ ಬೆಂಕಿಗೆ ಸುಟ್ಟು ಕರಕಲಾಗಿವೆ.

ADVERTISEMENT

ಕೃಷಿಕರಾಗಿದ್ದ ಸಂಜೀವ ಮೂಲ್ಯ ಅವರು ಹಲವು ಕಡೆ ಪ್ರಶಸ್ತಿ ಪಡೆದುಕೊಂಡವರು. ಸರೋಜಿನಿ ಬೀಡಿ ಕಟ್ಟಿ ಮನೆ ಖರ್ಚು ನೋಡಿಕೊಳ್ಳುತ್ತಿದರು. ಪುತ್ರಿ ಅಶ್ವಿತಾ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಮನೆ ಖರ್ಚು ವೆಚ್ಚಗಳನ್ನು ಪೂರೈಸುತ್ತಿದ್ದ ದಂಪತಿ ಏಕೈಕ ಪುತ್ರಿಗೆ ಶಿಕ್ಷಣ ನೀಡುತ್ತಿದ್ದರು. ಇದೀಗ ಪೋಷಕರನ್ನು ಕಳೆದುಕೊಂಡು ಪುತ್ರಿ ಅನಾಥೆಯಾಗಿದ್ದಾರೆ. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವೇಣೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂದೇಶ್ ಪಿ.ಜಿ., ಶಾಸಕ ಹರೀಶ್ ಪೂಂಜ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಧರಣೇಂದ್ರ ಕುಮಾರ್ ಭೇಟಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಎಎಸ್‌ಪಿ ಸಾಹಿದುಲ್ಲಾ ಅದಾವತ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಡುಗಿನಿಂದ ವಿದ್ಯುತ್‌ ಪರಿವರ್ತಕದಲ್ಲಿ ಏಕಾಏಕಿ ಅಧಿಕ ಪ್ರಮಾಣದ ವಿದ್ಯುತ್ ಹರಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಪೊದೆಯೂ ಬೆಂಕಿಗಾಹುತಿಯಾಗಿದೆ. ಈ ವಿದ್ಯುತ್‌ ಪರಿವರ್ತಕದಿಂದ ಸಂಪರ್ಕಿಸಿರುವ ಮೂರ್ನಾಲ್ಕು ಮನೆಗಳ ವಯರಿಂಗ್‍ಗಳು ಸುಟ್ಟು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.