ADVERTISEMENT

ದುಬೈನಿಂದ ಬಂದವರಲ್ಲಿ ಸೋಂಕು

ಒಂದೇ ದಿನ 16 ಮಂದಿಗೆ ಕೋವಿಡ್‌–19, ಸೋಂಕಿತರ ಸಂಖ್ಯೆ ಈಗ 50

​ಪ್ರಜಾವಾಣಿ ವಾರ್ತೆ
Published 15 ಮೇ 2020, 15:57 IST
Last Updated 15 ಮೇ 2020, 15:57 IST

ಮಂಗಳೂರು: ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟಿನಿಂದ ಜಿಲ್ಲೆಯಲ್ಲಿ ವ್ಯಾಪಕಗೊಳ್ಳುತ್ತಿರುವ ಕೋವಿಡ್–19 ಸೋಂಕು ಇದೀಗ ದುಬೈನಿಂದ ಮಂಗಳೂರಿಗೆ ಬಂದಿರುವ ಪ್ರಯಾಣಿಕರ ಪೈಕಿ 15 ಮಂದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

ಇದೇ 12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 176 ಮಂದಿ ಪೈಕಿ, ನಗರದಲ್ಲಿ ಕ್ವಾರಂಟೈನ್‌ಗೆ ಒಳಗಾಗಿರುವ 125 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪೈಕಿ 15 ಮಂದಿಗೆ ಕೋವಿಡ್‌–19 ತಗಲಿರುವುದು ಖಚಿತವಾಗಿದೆ. ಇವರಲ್ಲಿ 12 ಪುರುಷರಿಗೆ ಮತ್ತು 3 ಮಹಿಳೆಯರಿಗೆ ಸೋಂಕು ದೃಢವಾಗಿದೆ. ಈ ಪೈಕಿ ಒಬ್ಬರು ಉಡುಪಿ ಜಿಲ್ಲೆಯವರಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ದುಬೈನಿಂದ ಬಂದ ಪ್ರಯಾಣಿಕರ ಪೈಕಿ 15 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಇದರಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ತಗಲಿದ್ದು, 45 ವರ್ಷದ ಗಂಡ, 33 ವರ್ಷದ ಹೆಂಡತಿ ಹಾಗೂ 6 ವರ್ಷದ ಮಗ ಸೇರಿದ್ದಾರೆ. ಇದರ ಜತೆಗೆ 60 ಮೇಲಿನ ವಯೋಮಾನದ ಐವರಲ್ಲಿ ಸೋಂಕು ಖಚಿತವಾಗಿದೆ ಎಂದರು.

ADVERTISEMENT

ವಿದೇಶದಿಂದ ಬಂದಿರುವ ಗರ್ಭಿಣಿಯರಲ್ಲಿ ಸೋಂಕು ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹರಡುವಿಕೆ ಆತಂಕ ಕಡಿಮೆ: ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ದುಬೈನಿಂದ ಬಂದ 176 ಜನರನ್ನು ಮನೆಗೆ ತೆರಳಲು ಹಾಗೂ ಯಾರನ್ನು ಸಂಪರ್ಕಿಸಿಲು ಬಿಡದೇ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಈ ಕ್ರಮದಿಂದ ಜಿಲ್ಲೆಯ ಜನರಿಗೆ ಕೋವಿಡ್‌–19 ಹರಡುವ ಸಾಧ್ಯತೆ ಇರುವ ಕಡಿಮೆಯಾಗಿದೆ.

ದುಬೈನಿಂದ ಬಂದ ವಿಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 96, ಉಡುಪಿ ಜಿಲ್ಲೆಯ 49 ಹಾಗೂ ಇತರ ಜಿಲ್ಲೆಗಳ 31 ಪ್ರಯಾಣಿಕರಿದ್ದರು. ಅವರಲ್ಲಿ 38 ಗರ್ಭಿಣಿಯರು, ವೈದ್ಯಕೀಯ ಚಿಕಿತ್ಸೆ ಪಡೆಯುವ ನಿರೀಕ್ಷೆಯಲ್ಲಿರುವವರು, ದುಬೈನಲ್ಲಿ ಕೆಲಸ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ತುರ್ತು ವೈದ್ಯಕೀಯ ಅಗತ್ಯ ಇರುವವರು, ಪ್ರವಾಸಕ್ಕೆ ಹೋಗಿ ಉಳಿದವರು ಇದರಲ್ಲಿ ಸೇರಿದ್ದಾರೆ.

ಸುರತ್ಕಲ್‌ ವೃದ್ಧೆಗೂ ಪಾಸಿಟಿವ್‌; ಪತ್ತೆಯಾಗದ ಮೂಲ

ಸುರತ್ಕಲ್ ಗ್ರಾಮದ 68 ವರ್ಷದ ಮಹಿಳೆಗೆ ಕೋವಿಡ್‌–19 ಸೋಂಕು ಖಚಿತವಾಗಿದೆ. ಹೀಗಾಗಿ ಸುರತ್ಕಲ್ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವಾಗಿ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಸುರತ್ಕಲ್ ಮೂಲದ ಮಹಿಳೆಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂದು ಇನ್ನೂ ಖಚಿತವಾಗಿಲ್ಲ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಖಚಿತವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.