ADVERTISEMENT

19ರಿಂದ ‘ಎತ್ತಿನಹೊಳೆ’ ವಿರುದ್ಧ ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2015, 4:59 IST
Last Updated 9 ಸೆಪ್ಟೆಂಬರ್ 2015, 4:59 IST

ಪುತ್ತೂರು: ಎತ್ತಿನಹೊಳೆ ಯೋಜನೆ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ. ಆದ್ದರಿಂದ ಇದೇ 19ರಿಂದ ಗ್ರಾಮೀಣ ಭಾಗಗಳಲ್ಲಿ ಜಾಗೃತಿ, ಸಾರ್ವಜನಿಕ ಚರ್ಚಾ ಕಾರ್ಯಕ್ರಮ, ಗ್ರಾಮ ಪಂಚಾಯಿತಿ ಗಳಲ್ಲಿ ನಿರ್ಣಯ ಕೈಗೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಎಳನೀರು ಪ್ರದೇಶದ ಕೆಂಪುಹೊಳೆ, ಕೇರಿಹೊಳೆ, ಅಡ್ಡಹೊಳೆ, ಕಾಡುಮನೆಹೊಳೆ, ಹೋಂಗಡಹೊಳೆ, ಎತ್ತಿನಹಳ್ಳ, ಕಾಗಿನೇರಿ ಹಳ್ಳ, ಭರ್ಚಿನ ಹಳ್ಳಗಳಿಗೆ ಅಣೆಕಟ್ಟು ಕಟ್ಟಿ ಬಯಲು ಸೀಮೆಗೆ ತಿರುಗಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲಾ ತೊರೆಗಳು ನೇತ್ರಾವತಿಯನ್ನು ಸೇರುತ್ತವೆ. ಎತ್ತಿನ ಹೊಳೆ ಜತೆಗೆ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿನ ಎಲ್ಲಾ ನದಿ, ತೊರೆ ಗಳನ್ನು ತಿರುಗಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಅಣೆಕಟ್ಟೆಗಳಲ್ಲಿ ಸಂಗ್ರಹವಾದ ನೀರನ್ನು, ಬಯಲು ಸೀಮೆಗೆ ಸಾಗಿಸುವ ಅವೈಜ್ಞಾನಿಕ ಯೋಜನೆಯಿದು. ಯಾಕೆಂದರೆ ನೀರು ಪೂರೈಕೆಗೆ ಸುಮಾರು 500 ಮೆಗಾ ವಾಟ್‌ ವಿದ್ಯುತ್ ಅವಶ್ಯಕತೆಯಿದೆ. ಆದರೆ ಸದ್ಯ 100 ಮೆಗಾವಾಟ್‌ ವಿದ್ಯುತ್ ಮಾತ್ರ ಸಿಗಬಹುದು. ಉಳಿದ ವಿದ್ಯುತ್ ಸರಬ ರಾಜಿಗೆ ತಂತಿ, ಕಂಬ ಹಾಕುವುದು ಅನಿ ವಾರ್ಯ. ಇದಕ್ಕಾಗಿ ಕಾಡು ನಾಶ, ಪ್ರಾಣಿ ಗಳ ಪಥ ನಾಶ ನಡೆಯಲಿದೆ. ಈ ಹಿನ್ನೆಲೆ ಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂ ಡಿದ್ದು, 19ರಂದು ಸುಬ್ರಹ್ಮಣ್ಯದಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.

ಪಶ್ಚಿಮ ಘಟ್ಟವನ್ನು ಲೂಟಿ ಮಾಡುವ ತಂತ್ರಗಾರಿಕೆ ಇದಾಗಿದೆ. ಕಪಿಲಾ, ನೇತ್ರಾವತಿ, ಕುಮಾರಧಾರ ನದಿಗಳಿಗೆ ಧಾರ್ಮಿಕ ಹಿನ್ನೆಲೆ ಇದೆ. ಇದನ್ನು ಪೂಜನೀಯ ಭಾವದಿಂದ ಕಾಣುವ ಪರಂಪರೆ ನಮ್ಮದು. ಆದರೆ ಜನಪ್ರತಿನಿಧಿಗಳ ನಿರ್ಲಕ್ಷೃದ ವಿರುದ್ಧವೂ ಹೋರಾಟ ಅನಿವಾರ್ಯ ಎಂದರು.

ಯೋಜನೆ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಲು ಚಿಂತಿಸಲಾಗಿದೆ. ಮೊದಲ ಹಂತವಾಗಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು. ಬಳಿಕ ಗ್ರಾಮ ಸಂಪರ್ಕ, ಜಾಗೃತಿ ಕಾರ್ಯಕ್ರಮದ ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು. ಎಲ್ಲಾ ಪಕ್ಷದ ಕಾರ್ಯಕರ್ತರು ಹೋರಾ ಟಕ್ಕೆ ಕೈಜೋಡಿಸಬೇಕು. ಬೇರೆ ಪಕ್ಷದ ನಾಯಕರಿಗೆ ಕಪ್ಪು ಬಾವುಟ ಹಿಡಿಯುವ ಬದಲು, ತಮ್ಮದೇ ಪಕ್ಷದ ನಾಯಕರಿಗೆ ಕಪ್ಪು ಬಾವುಟ ಹಿಡಿಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ವೇದಿಕೆ ಗೌರವ ಸಲಹೆಗಾರರಾದ ಹರಿಣಿ ಪುತ್ತೂರಾಯ, ಸದಸ್ಯರಾದ ಸುಭಾಷಿಣಿ ಶಿವರಾಮ ಸುಬ್ರಹ್ಮಣ್ಯ, ಪರಮೇಶ್ವರಿ ಬಬ್ಬಿಲಿ ಬಲ್ನಾಡು, ಜಯರಾಮ ಕಟ್ಟೆಮನೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT