ADVERTISEMENT

ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಸಿದ್ಧತೆ?

ಕೋಮು ದ್ವೇಷಕ್ಕೆ ನಲುಗಿದ ದ.ಕ: ತಿಂಗಳಲ್ಲಿ 3 ಹತ್ಯೆ: ಕಾರಣವಿಲ್ಲದೆಯೇ ಹಲವರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 7:26 IST
Last Updated 29 ಮೇ 2025, 7:26 IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷಕ್ಕೆ ಕಡಿವಾಣ ಹಾಕಲು ವಿಫಲವಾದ ಹಿರಿಯ ಪೊಲೀಸ್‌ ಅಧಿಕಾರಿಗಳ ತಲೆದಂಡಕ್ಕೆ ಸಿದ್ಧತೆ ನಡೆದಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. 

ಇದು ನಿಜವೇ ಆಗಿದ್ದರೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್‌ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಯತೀಶ್‌ ಎನ್‌.ಸೇರಿ  ಕೆಲವು ಐಪಿಎಸ್ ಅಧಿಕಾರಿಗಳ ವರ್ಗವಾಗುವ ಸಾಧ್ಯತೆ ಇದೆ. 

ಪೊಲೀಸ್ ಕಮಿಷನರ್ ಆಗಿ  ಮುಖ್ಯಮಂತ್ರಿಯವರ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್‌ ಅಧಿಕಾರಿಯನ್ನು ನೇಮಿಸುವ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೆರೆಯ ಜಿಲ್ಲೆಯಲ್ಲಿ ಖಡಕ್ ಅಧಿಕಾರಿ ಎಂದು ಗುರುತಿಸಿಕೊಂಡ  ಐಪಿಎಸ್ ಅಧಿಕಾರಿಯನ್ನು ನೇಮಿಸುವ ಸಿದ್ಧತೆನಡೆದಿದೆ ಎಂದು ಮೂಲಗಳು ತಿಳಿಸಿವೆ.                           

ADVERTISEMENT

ನಗರದ ಹೊರವಲಯದ ಕಡುಪುವಿನಲ್ಲಿ ಏಪ್ರಿಲ್ 27ರಂದು ನಡೆದ ಕೇರಳದ ವಯನಾಡಿನ ಅಶ್ರಫ್ ಗುಂಪುಹತ್ಯೆ ನಡೆದು ಸರಿಯಾಗಿ ಒಂದು ತಿಂಗಳು ಮುಗಿಯುವಷ್ಟರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಕೋಮುದ್ವೇಷಕ್ಕೆ ಬಲಿಯಾಗಿದ್ದಾರೆ. ಹಲವರು ವಿನಾಕಾರಣ ಹಲ್ಲೆಗೆ ಒಳಗಾಗಿದ್ದಾರೆ. ಜಿಲ್ಲೆಯ ಮತಾಂಧ ಗುಂಪುಗಳು ಒಡಲೊಳಗೆ ಬಚ್ಚಿಟ್ಟುಕೊಂಡ  ಕೋಮು ದ್ವೇಷ ಜಿಲ್ಲೆಯ ಜನರನ್ನು ಆತಂಕದ ಮಡುವಿಗೆ ದೂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಪ್ರತೀಕಾರದ ಸಂದೇಶಗಳು,ಅದಕ್ಕೆ ವ್ಯಕ್ತವಾಗುವ  ಅವಹೇಳನಕಾರಿ ಪ್ರತಿಕ್ರಿಯೆಗಳು ಕೋಮು ದ್ವೇಷದ ದಾರಿಯು ಜಿಲ್ಲೆಯ ಶಾಂತಿಪ್ರಿಯ ಜನರಲ್ಲಿ ಕಳವಳ ಮೂಡಿಸಿವೆ. ಸುಹಾಸ್ ಹತ್ಯೆ ಬಳಿಕ ದ್ವೇಷ ಹುಟ್ಟಿಸುವ ಸಂದೇಶಗಳನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದವರು ಅದನ್ನು ಲೈಕ್‌ ಮಾಡಿದ್ದವರು, ಅಂತಹ ಸಂದೇಶಗಳನ್ನು ಬೇರೆಯವರಿಗೆ ಫಾರ್ವರ್ಡ್ ಮಾಡಿದವರು ಸೇರಿ 45ಕ್ಕೂ ಪ್ರಕರಣಗಳು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಾಗೂ ಐದಕ್ಕೂ ಹೆಚ್ಚು ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ದಾಖಲಾಗಿದ್ದವು. ಆರಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ರದ್ದುಪಡಿಸಲಾಗಿತ್ತು. ಆದರೂ ಸಾಮಾಜಿಕ ಮಾಧ್ಯಮಗಳ ಮೂಲಕ ದ್ವೇಷ ಹಾಗೂ ಸುಳ್ಳು ಸುದ್ದಿ ಹರಡುವುದು ನಿಂತಿಲ್ಲ.

ದಕ್ಷಿಣಕನ್ನಡ ಮತ್ತು ಉಡುಪಿಜಿಲ್ಲೆಗಳನ್ನು ಕೇಂದ್ರೀಕರಿಸಿ ಕೋಮು ಹಿಂಸೆ ನಿಗ್ರಹದಳ ಸ್ಥಾಪಿಸುವ ಕುರಿತ ಗೃಹ ಸಚಿವ  ಜಿ.ಪರಮೇಶ್ವರ ಅವರ ಹೇಳಿಕೆಗೂ ಇಂತಹ ಕೃತ್ಯದಲ್ಲಿ ತೊಡಗಿದವರು ಸೊಪ್ಪುಹಾಕಿಲ್ಲ.

‘ಕೋಮು ಹಿಂಸೆ ಹರಡುವವರ ವಿರುದ್ಧ ಕಠಿಣ ಕ್ರಮ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಸಿದ್ಧತೆಗಳು ನಡೆದಿವೆ’ ಎಂದು ಎಡಿಜಿಪಿ ಆರ್.ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.                                                                                       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.