ADVERTISEMENT

ಒಂದೇ ದಿನ ತ್ರಿಶತಕ ದಾಟಿದ ಸೋಂಕು

ಕೋವಿಡ್‌ ಸೋಂಕಿನಿಂದ 8 ಮಂದಿ ಸಾವು, 71ಕ್ಕೆ ಏರಿದ ಮೃತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 16:42 IST
Last Updated 17 ಜುಲೈ 2020, 16:42 IST

ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 311 ಜನರಿಗೆ ಕೋವಿಡ್‌–19 ಸೋಂಕು ಇರುವುದು ದೃಢವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,074ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಶುಕ್ರವಾರ ಮತ್ತೆ 115 ಮಂದಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 1,278 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಜಿಲ್ಲೆಯಲ್ಲಿ 1,725 ಸಕ್ರಿಯ ಪ್ರಕರಣಗಳಿವೆ.

ಅಲ್ಲದೇ, ಶುಕ್ರವಾರ 8 ಮಂದಿ ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಸೋಂಕು ಇರುವುದು ದೃಢವಾಗಿದೆ. ಈ ಪೈಕಿ ಮೂವರು ಬೇರೆ ಜಿಲ್ಲೆಯವರಾಗಿದ್ದು, ಐವರು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ.

ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ 72 ವರ್ಷದ ವೃದ್ಧೆ, 56 ವರ್ಷದ ವ್ಯಕ್ತಿ, 72 ವರ್ಷದ ವೃದ್ಧ, 70 ವರ್ಷದ ವೃದ್ಧ, 69 ವರ್ಷದ ವೃದ್ಧರು ಗುರುವಾರ ಮೃತಪಟ್ಟಿದ್ದು, ಇವರಿಗೆ ಕೋವಿಡ್ ತಗಲಿರುವುದು ಶುಕ್ರವಾರ ದೃಢವಾಗಿದೆ. ಈ ಪೈಕಿ 72 ವರ್ಷದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 53 ವರ್ಷದ ವ್ಯಕ್ತಿಯನ್ನು ಗುರುವಾರ ಮೃತಪಟ್ಟ ನಂತರ ಆಸ್ಪತ್ರೆಗೆ ಕರೆತರಲಾಗಿದ್ದು, ಅವರಿಗೂ ಕೋವಿಡ್ ಇರುವುದು ಖಚಿತವಾಗಿದೆ.

ADVERTISEMENT

ಮಧುಮೇಹ, ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 68 ವರ್ಷದ ವೃದ್ಧ, ಹೃದ್ರೋಗ, ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದ 65 ವರ್ಷದ ವೃದ್ಧ ಶುಕ್ರವಾರ ಮೃತಪಟ್ಟಿದ್ದು, ಅವರಿಗೂ ಕೋವಿಡ್–19 ದೃಢವಾಗಿದೆ.

ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಈ ಪೈಕಿ 12 ಮಂದಿ ಬೇರೆ ಜಿಲ್ಲೆಗೆ ಸಂಬಂಧಿಸಿದ್ದು, 59 ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಸಹಾಯವಾಣಿ: ಮನೆಯಲ್ಲಿಯೇ ನಿಗಾವಣೆಯಲ್ಲಿರುವ ಸೋಂಕಿತರ ಸಹಾಯಕ್ಕಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾರ್ಗದರ್ಶನದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೇಲುಸ್ತುವಾರಿಯಲ್ಲಿ ಜಿಲ್ಲೆಯ ಎಲ್ಲ ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.

ರೋಗಲಕ್ಷಣ ಇಲ್ಲದ ಸೋಂಕಿತರು ಮನೆಯಲ್ಲಿ ನಿಗಾವಣೆಯಲ್ಲಿ ಇರುವುದರಿಂದ ಅವರ ಮೇಲ್ವಿಚಾರಣೆಯನ್ನು ಸಹಾಯವಾಣಿ ಮೂಲಕ ಮಾಡಲಾಗುತ್ತದೆ. ರೋಗಿಗಳಿಗೆ ವೈದ್ಯರು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ, ಅವರಿಂದ ನಿರಂತರ ಮಾಹಿತಿ ಪಡೆಯಲಿದ್ದಾರೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ತಿಳಿಸಿದ್ದಾರೆ.

ಮಿಥುನ್‌ ರೈಗೆ ಕೋವಿಡ್‌

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ ರೈ ಅವರಿಗೂ ಕೋವಿಡ್–19 ದೃಢಪಟ್ಟಿದೆ.

ಈ ಬಗ್ಗೆ ಸ್ವತಃ ಮಿಥುನ್‌ ರೈ ಟ್ವೀಟ್‌ ಮಾಡಿದ್ದು, ‘ನನಗೆ ಕೊರೊನಾ ಪಾಸಿಟಿವ್‌ ಆಗಿದೆ. ನಾನು ಬೆಂಗಳೂರಿನಲ್ಲಿ ಕ್ಯಾರಂಟೈನ್‌ಗೆ ಒಳಗಾಗಿದ್ದೇನೆ. ನಿಮ್ಮ ಎಲ್ಲ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ ನಾನು ಚೇತರಿಸಿಕೊಳ್ಳುತ್ತೇನೆ ಮತ್ತು ಶೀಘ್ರದಲ್ಲೇ ನಿಮ್ಮ ಸೇವೆಗೆ ಮರಳುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆಗೆ ಒಳಪಡಿ’ ಎಂದು ತಿಳಿಸಿದ್ದಾರೆ.

ತಜ್ಞರ ತಂಡದಿಂದ ಪರಿಶೀಲನೆ

ಕೋವಿಡ್–19 ನಿಂದ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಪರಿಸ್ಥಿತಿಯನ್ನು ಪರಿಶೀಲಿಸಲು ಮೂವರು ತಜ್ಞರನ್ನು ಒಳಗೊಂಡ ತಂಡ ಬೆಂಗಳೂರಿನಿಂದ ನಗರಕ್ಕೆ ಬಂದಿದ್ದು, ಮೃತಪಟ್ಟವರ ವೈದ್ಯಕೀಯ ವರದಿಗಳ ಕುರಿತು ಪರಿಶೀಲನೆ ನಡೆಸಿದೆ.

ಜಿಲ್ಲಾಡಳಿತದ ಮನವಿಯ ಮೇರೆಗೆ ಜಿಲ್ಲೆಗೆ ಬಂದಿರುವ ಈ ತಜ್ಞರು, ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟಿರುವವರ ಆರೋಗ್ಯ ಸ್ಥಿತಿ, ಚಿಕಿತ್ಸೆ, ಅವರಿಗೆ ಇದ್ದ ಕಾಯಿಲೆಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಪಡೆಯುತ್ತಿದೆ. ಇನ್ನು ಎರಡು ದಿನ ತಂಡದ ಪರಿಶೀಲನೆ ನಡೆಯಲಿದ್ದು, ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.