ADVERTISEMENT

5ರಂದು ಉಪ್ಪಿನಂಗಡಿ ಗ್ರಾ.ಪಂ. ಕಟ್ಟಡ ಉದ್ಘಾಟನೆ

₹2 ಕೋಟಿ ವೆಚ್ಚದಲ್ಲಿ ಆಕರ್ಷಕ ವಿನ್ಯಾಸದಲ್ಲಿ ನಿರ್ಮಿಸಲಾದ ಕಟ್ಟಡ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 11:26 IST
Last Updated 2 ಮಾರ್ಚ್ 2018, 11:26 IST
ಉದ್ಘಾಟನೆಗೆ ಸಿದ್ಧವಾಗಿರುವ ಗ್ರಾಮ ಪಂಚಾಯಿತಿ ಕಟ್ಟಡ
ಉದ್ಘಾಟನೆಗೆ ಸಿದ್ಧವಾಗಿರುವ ಗ್ರಾಮ ಪಂಚಾಯಿತಿ ಕಟ್ಟಡ   

ಉಪ್ಪಿನಂಗಡಿ: ಒಂದೇ ಸೂರಿನಡಿ ವಿವಿಧ ಕಚೇರಿ ಇರುವ ಮಿನಿ ವಿಧಾನಸೌಧ ಕಲ್ಪನೆಯ ರಾಜ್ಯದ ಮೊಟ್ಟ ಅತಿ ದೊಡ್ಡ ಗ್ರಾಮ ಪಂಚಾಯಿತಿ ಕಟ್ಟಡ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಇದೇ 5ರಂದು ಉದ್ಘಾಟನೆಯಾಗಲಿದೆ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಎಚ್.ಕೆ.ಪಾಟೀಲ್ ಕಟ್ಟಡವನ್ನು ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಭಾಂಗಣ ಉದ್ಘಾಟಿಸುವರು. ಶಾಸಕಿ ಶಕುಂತಳಾ ಶೆಟ್ಟಿ ಗ್ರಾಮಕರಣಿಕರ ಕಚೇರಿಯನ್ನು ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಗೋದಾಮು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ’ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿ ನಡೆಯುವ ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಸೇವಾ ಸಚಿವ ಯು.ಟಿ. ಖಾದರ್, ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬೆಳ್ತಂಗಡಿ ಶಾಸಕ ವಸಂತ ಬಂಗೇರ, ಸುಳ್ಯ ಶಾಸಕ ಅಂಗಾರ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್‍ಚಂದ್ರ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಐವನ್ ಡಿ'ಸೋಜ ಇತರರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ADVERTISEMENT

600 ಮಂದಿ ಕುಳಿತುಕೊಳ್ಳುವ ಸಭಾ ಭವನ: ನೂತನ ಕಟ್ಡದಲ್ಲಿ ಸುಮಾರು 500ರಿಂದ 600 ಮಂದಿ ಕುಳಿತುಕೊಳ್ಳುವ ವಿಶಾಲವಾದ ಮತ್ತು ಸುಸಜ್ಜಿತ ವ್ಯವಸ್ಥೆಯನ್ನು ಒಳಗೊಂಡ ಸಭಾ ಭವನ ಇದ್ದು, ಇದೇ ಕಟ್ಟಡದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಕರಣಿಕರ ಕಚೇರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಕಚೇರಿ, ವಿದ್ಯುತ್ ಬಿಲ್ ಸ್ವೀಕಾರ ಕೇಂದ್ರ ವ್ಯವಸ್ಥೆ ಹಾಗೂ ಅಂಗವಿಕಲರ ಗುರುತು ಚೀಟಿ ಕೇಂದ್ರ ವ್ಯವಸ್ಥೆ, ಜೆರಾಕ್ಸ್, ಅರ್ಜಿ ನಮೂನೆ ಕೇಂದ್ರ ಇರುತ್ತದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ ಹೆಗ್ಡೆ, ಯು.ಕೆ. ಇಬ್ರಾಹಿಂ, ರಮೇಶ್ ಬಂಡಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್, ಕಾರ್ಯದರ್ಶಿ ಶಾರದಾ ಇದ್ದರು.
***
₹14 ಲಕ್ಷ ವೆಚ್ಚದಲ್ಲಿ ಗೋದಾಮು

ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ₹14 ಲಕ್ಷ ವೆಚ್ಚದಲ್ಲಿ ಗೋದಾಮು ಕಟ್ಟಡ ನಿರ್ಮಿಸಲಾಗಿದೆ. ಪುತ್ತೂರು ನಿರ್ಮಾಣ್ ಆರ್ಕಿಟೆಕ್ಸ್ ಸಂಸ್ಥೆಯ ಸಚ್ಚಿದಾನಂದ ಅವರ ವಿಶೇಷ ವಿನ್ಯಾಸದೊಂದಿಗೆ ಆಕರ್ಷಕವಾಗಿ ನಿರ್ಮಿಸಲಾಗಿದೆ. ಗ್ರಾಮಸ್ಥರ ಅಗತ್ಯಕ್ಕೆ ಅನುಗುಣವಾಗಿ ಎಲ್ಲ ರೀತಿಯಲ್ಲಿ ಸಹಕಾರಿ ಆಗುವ ನಿಟ್ಟಿನಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.