ADVERTISEMENT

ದೀಪಕ್ ಹತ್ಯೆಗೆ ಶಾಸಕಿ ಶಕುಂತಳಾ ಶೆಟ್ಟಿ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 5:36 IST
Last Updated 5 ಜನವರಿ 2018, 5:36 IST

ಪುತ್ತೂರು: ದೀಪಕ್ ರಾವ್ ಹತ್ಯೆಯನ್ನು ಪುತ್ತೂರು ಶಾಸಕಿ ಶಕುಂತಳಾ ಟಿ.ಶೆಟ್ಟಿ ಖಂಡಿಸಿದ್ದಾರೆ. ಪುತ್ತೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕಾನೂನನ್ನು ಕೈಗೆತ್ತಿಕೊಂಡು ಇಂತಹ ಅಮಾನವೀಯ ಕೃತ್ಯದ ಮೂಲಕ ದ್ವೇಷ ಸಾಧಿಸುವುದು ಸಮಾಜದ ನಾಗರಿಕ ಜನತೆ ತಲೆತಗ್ಗಿಸುವಂತಹ ಕೆಲಸ. 

ಇಂತಹ ಘಟನೆಗಳು ಎಲ್ಲಿ ನಡೆದರೂ ಅದು ಅಕ್ಷಮ್ಯ ಎಂದಿರುವ ಅವರು ಹತ್ಯೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸುವ ಮೂಲಕ ಪೊಲೀಸರ ಚಾಕಚಕ್ಯತೆಯನ್ನು ಶ್ಲಾಘಿಸಿದ್ದಾರೆ.

ಜಿಲ್ಲೆಯ ಜನತೆಗೆ ಶಾಂತಿ ಬೇಕು. ಹತ್ಯೆ ವಿಚಾರದಲ್ಲಿ ಶಾಂತಿಯುತ ಪ್ರತಿಭಟನೆ ಇರಲಿ. ಆದರೆ ಈ ಪ್ರಕರಣವನ್ನು ಎತ್ತಿಕೊಂಡು ಇನ್ನೊಂದು ಕಡೆಗೆ ಕೊಂಡೊಯ್ಯುವ, ಜನತೆಗೆ ಯಾವುದೇ ರೀತಿಯ ನೋವು ತರುವ ಕೆಲಸ ಆಗಬಾರದು ಎಂದಿರುವ ಅವರು ಶಾಂತಿ ಕಾಪಾಡಲು ಜಿಲ್ಲೆಯ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ರಾಜಕೀಯ ಬೇಡ: ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಸುಳ್ಯ ಮಾತನಾಡಿ, ‘ಸಾವಿನ ಮನೆಯಲ್ಲಿ ಯಾರೂ ರಾಜಕೀಯ ಮಾಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಗೆ ಎಲ್ಲ ಪಕ್ಷಗಳು ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ. ಹತ್ಯೆ ತನಿಖೆಯನ್ನು ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಆರೋಪಿಗಳನ್ನು ಬಂಧನ ಮಾಡುವ ಮೂಲಕ ಯಶಸ್ವಿ ಕಾರ್ಯಚಾರಣೆ ಮಾಡಿದ್ದಾರೆ ಎಂದರು.

ಉಜಿರೆ: ಆಚಾರ್ಯ 108 ಶ್ರೀ ಪುಷ್ಪದಂತ ಸಾಗರ ಮಹಾರಾಜರು ಗುರುವಾರ ಉಜಿರೆಯಲ್ಲಿ ಪ್ರವೀಣ ಕುಮಾರ್ ಇಂದ್ರರ ನಿವಾಸ ಸತ್ಯಧಾಮದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಂಗಳ ಕಲಶ ಸ್ಥಾಪನೆ ಮಾಡಿ ಆಶೀರ್ವದಿಸಿದರು.

ನವರತ್ನಗಳು ಹಾಗೂ ಮಂಗಳ ದ್ರವ್ಯಗಳಿಂದ ಕೂಡಿದ ಮಂಗಳ ಕಲಶ ಸ್ಥಾಪನೆಯಿಂದ ಕುಟುಂಬದವರ ಆಯುರಾರೋಗ್ಯ, ಸಿರಿ-ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಿದರು. 108  ಮುನಿಶ್ರೀ ಪ್ರಮುಖ್ಸಾಗರ ಮಹಾರಾಜರು, 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಉಪಸ್ಥಿತರಿದ್ದರು. ಪ್ರವೀಣ ಕುಮಾರ್ ಇಂದ್ರ, ಅಶ್ವಿನಿ ಮತ್ತು ಕುಟುಂಬದವರು ಪೂಜೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.