ADVERTISEMENT

ಪ್ರಚಾರ ಮಾಡಿ; ಶಾಂತಿ ಕದಡಬೇಡಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 6:52 IST
Last Updated 10 ಫೆಬ್ರುವರಿ 2018, 6:52 IST
ಪ್ರಚಾರ ಮಾಡಿ; ಶಾಂತಿ ಕದಡಬೇಡಿ
ಪ್ರಚಾರ ಮಾಡಿ; ಶಾಂತಿ ಕದಡಬೇಡಿ   

ಮಂಗಳೂರು: ಕರಾವಳಿ ಜಿಲ್ಲೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬರುತ್ತಿರುವುದು ಸ್ವಾಗತಾರ್ಹ. ಅವರು ಇಲ್ಲಿ ಪ್ರಚಾರ ಮಾಡಿ ಹೋದರೆ ನಮ್ಮ ಅಭ್ಯಂತರವಿಲ್ಲ. ಶಾಂತಿ ಕದಡುವ ಪ್ರಯತ್ನ ಮಾಡಬಾರದು ಎಂದು ಆಹಾರ ಸಚಿವ ಯು.ಟಿ. ಖಾದರ್‌ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡುತ್ತಿರುವುದನ್ನು ಗಮನಿಸಿದರೆ, ಕರಾವಳಿಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಬಲವಾಗಿರುವುದು ಸ್ಪಷ್ಟವಾಗುತ್ತದೆ ಎಂದರು.

ಇಲ್ಲಿನ ಜನರು ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷವಾಗಲಿ ಪ್ರಚಾರ ಮಾಡುವುದು ಸಹಜ. ಆದರೆ, ಅದನ್ನೇ ನೆಪವಾಗಿ ಇಟ್ಟುಕೊಂಡು ಸೌಹಾರ್ದ ಹಾಳು ಮಾಡುವ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಫಲಾನುಭವಿಗಳು ಭರಿಸಬೇಕಾದ ಹಣವನ್ನು ಆಯಾ ಏಜೆನ್ಸಿಗಳಿಗೆ ರಾಜ್ಯ ಸರ್ಕಾರವೇ ಡಿಡಿ ಮೂಲಕ ಪಾವತಿಸುತ್ತಿದೆ. ಕೇಂದ್ರ ಸರ್ಕಾರ ಎಲ್ಲ ಮೊತ್ತವನ್ನು ನೇರವಾಗಿ ಪೆಟ್ರೋಲಿಯಂ ಕಂಪನಿಗಳಿಗೆ ಪಾವತಿಸುವಂತೆ ಷರತ್ತು ವಿಧಿಸಿದೆ. ಆದರೆ, ಕಂಪನಿಗಳು ಹಣ ಪಡೆದು ವಿಳಂಬ ಮಾಡಿದರೆ, ನಾವು ಯಾರನ್ನು ಪ್ರಶ್ನಿಸಬೇಕು ಎಂದು ಕೇಳಿದರು.

ಅಡುಗೆ ಅನಿಲ ಏಜೆನ್ಸಿಗಳು, ಪೆಟ್ರೋಲ್‌ ಬಂಕ್‌ ಆರಂಭಿಸಲು ರಾಜ್ಯ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲು ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ತಿಳಿಸಿದ ಖಾದರ್, ಈ ನಿಯಮ ಆಂಧ್ರಪ್ರದೇಶದಲ್ಲಿ ಈಗಾಗಲೇ ಇದ್ದು, ಅದನ್ನು ಅಧ್ಯಯನ ಮಾಡಿ, ಕರಡು ನಿಯಮಾವಳಿ ರಚಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.