ADVERTISEMENT

8ನೇ ಪರಿಚ್ಛೇದ: ಫೆಬ್ರವರಿಯಲ್ಲಿ `ದಿಲ್ಲಿ ಚಲೋ'

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:45 IST
Last Updated 3 ಡಿಸೆಂಬರ್ 2012, 8:45 IST

ಪಡುಬಿದ್ರಿ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ಸಲುವಾಗಿ ಅಕಾಡೆಮಿ ಫೆಬ್ರುವರಿ ತಿಂಗಳಲ್ಲಿ ದಿಲ್ಲಿ ಚಲೋ ಕಾಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.

ವಂಜಾರಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಶನಿವಾರ ಏರ್ಪಡಿಸಿದ್ದ  `ಚಾವಡಿ ಕೂಟ ತುಳುನಾಡಿನ ಆರಾಧನೆಗಳ ಪರಿಚಯ' ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಳುವರು ತಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಹಿತಿ ಡಾ.ಬಿ.ಜನಾರ್ದನ ಭಟ್ ಮಾತನಾಡಿ, ಸಾಮಾಜಿಕ ಇತಿಹಾಸ ಮತ್ತು ಭಾಷಾ ವಿಜ್ಞಾನದ ಆಧಾರಗಳೊಂದಿಗೆ ಬೆರ್ಮೆರ್ ಅನ್ನುವುದು ತುಳುನಾಡಿನಲ್ಲಿ ಮೊದಲು ದೈವ ಮತ್ತು ದೇವರು ಎನ್ನುವ ಅರ್ಥ ಕೊಡುವ ದ್ರಾವಿಡ ಮೂಲದ ಶಬ್ದವಾಗಿದ್ದು, ನಂತರ ಬ್ರಹ್ಮ ಎಂದು ಪರಿವರ್ತನೆಗೊಂಡು ಸ್ವತಂತ್ರ ಶಬ್ದವಾಗಿ ಉಳಿದಿದೆ ಎಂದರು.

ಜನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಮಾತನಾಡಿ, ತೌಳವ ಆರಾಧನೆಗಳ ವೈಶಿಷ್ಟ್ಯಗಳನ್ನು ಪಡುಬಿದ್ರಿ ಬ್ರಹ್ಮಸ್ಥಾನ, ಕುತ್ಯಾರಿನ ಪರಿಶಿಷ್ಟರಿಂದ ಪೂಜೆಗೊಳ್ಳುತ್ತಿರುವ ನಾಗಬನ ಮುಂತಾದ ಉದಾಹರಣೆಗಳೊಂದಿಗೆ ಸ್ವಾರಸ್ಯಕರವಾಗಿ ವಿವರಿಸಿದರು.
ಡಾ.ಎಸ್.ಆರ್. ಅರುಣ ಕುಮಾರ್ ಅವರು  `ಸಿರಿ ಆರಾಧನೆ' ವಿಷಯ ಕುರಿತು ಮಾತನಾಡಿದರು.

  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸೀತಾರಾಮ ಶೆಟ್ಟಿ,  ಚಾವಡಿ ಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಟಿ ವೈದ್ಯೆ ಲಲಿತಾ ಪೂಜಾರಿ ಅವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ರಿಜಿಸ್ಟ್ರಾರ್ ಚಂದ್ರಹಾಸ ರೈ, ಶಿಕ್ಷಕ ಜಗದೀಶ ಆಚಾರ್, ಸುಧಾಕರ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.