ADVERTISEMENT

ಆದಿಚುಂಚನಗಿರಿ ಸ್ವಾಮೀಜಿ ಕರೆಸದಿದ್ದಲ್ಲಿ ಕಾರ್ಯಕ್ರಮಕ್ಕೆ ಬಹಿಷ್ಕಾರ: ಎಚ್ಚರಿಕೆ

ಹಳೆಕೋಟೆ ಒಕ್ಕಲಿಗ ಸೇವಾ ಸಂಘದ ಕಟ್ಟಡ ಶಿಲಾನ್ಯಾಸಕ್ಕೆ ಶ್ರೀಂಗೇರಿ ಶ್ರೀಗಳಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 5:53 IST
Last Updated 10 ಏಪ್ರಿಲ್ 2025, 5:53 IST

ಬೆಳ್ತಂಗಡಿ: ‘ಹಳೆಕೋಟೆಯಲ್ಲಿ ನಿರ್ಮಿಸಲಾದ ತಾಲ್ಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಕಟ್ಟಡ ಮತ್ತು ಸಭಾಭವನದ ಉದ್ಘಾಟನೆಗೆ ಶೃಂಗೇರಿ ಶ್ರೀಗಳನ್ನು ಆಮಂತ್ರಿಸಿ, ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಕೈಬಿಟ್ಟಿರುವುದನ್ನು ಸಮುದಾಯವು ತೀವ್ರವಾಗಿ ಖಂಡಿಸುತ್ತದೆ. ನೂತನ ಕಟ್ಟಡ ಉದ್ಘಾಟನೆಗೆ ಆದಿಚುಂಚನಗಿರಿ ಸ್ವಾಮೀಜಿ ಕರೆಸದಿದ್ದಲ್ಲಿ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ’ ಎಂದು ಬೆಳ್ತಂಗಡಿ ತಾಲ್ಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಹೇಳಿದರು.

ಬೆಳ್ತಂಗಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಮಂತ್ರಣ ಪತ್ರಿಕೆ ಗಮನಿಸಿದಾಗ, ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿ ಹಾಗೂ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಇರುವುದು ಗಮನಕ್ಕೆ ಬಂದಿದೆ. ಇದು ಕೆಲವೇ ಕೆಲವು ಪದಾಧಿಕಾರಿಗಳು ಚರ್ಚಿಸಿ ತಗೆದುಕೊಂಡ ತೀರ್ಮಾನವಾಗಿದ್ದು, ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಅವಮಾನಿಸಿದಂತಾಗಿದೆ’ ಎಂದರು.

ಉಪಾಧ್ಯಕ್ಷ ವಸಂತ ಮರಕಡ ಮಾತನಾಡಿ, ‘ನಮಗೆ ಶೃಂಗೇರಿ ಶ್ರೀಗಳ ಮೇಲೆ ಅಪಾರ ಗೌರವವಿದೆ. ಅವರ ಆಹ್ವಾನಕ್ಕೆ ನಮ್ಮ ಸ್ವಾಗತಿವಿದ್ದು, ಅವರೊಂದಿಗೆ ಸಮುದಾಯದ ಸ್ವಾಮೀಜಿ ಅವರನ್ನೂ ಕರೆಸುವುದು ಹಿರಿಯರ ಕರ್ತವ್ಯ. ಗೌಡ ಸಮುದಾಯದ ಬೆಳವಣಿಗೆಗೆ, ಸಂಘಟನೆಗೆ ಶ್ರಮಿಸಿದ ಆದಿಚುಂಚನಗಿರಿ ಮೂಲ ಗುರು ಮಠವನ್ನು ಬಿಟ್ಟು ಆಶ್ರಯ ನೀಡಿದ ಶೃಂಗೇರಿ ಶ್ರೀಗಳನ್ನು ಏಕಾಏಕಿ ಆಹ್ವಾನಿಸಿದ್ದು ಸಮುದಾಯದ ಮಂದಿಗೆ ಬೇಸರ ತರಿಸಿದೆ. ಯಾವ ಉದ್ದೇಶದಿಂದ ಈ ರೀತಿಯ ನಡೆದುಕೊಂಡಿದ್ದಾರೆ ಎಂಬುದರ ಸ್ಪಷ್ಟತೆಯಿಲ್ಲ. ಗೌಡರ ಯಾನೆ ಒಕ್ಕಲಿಗ ಸಮುದಾಯಕ್ಕೆ ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠವೇ ಗುರುಪೀಠವಾಗಿದೆ’ ಎಂದರು.

ADVERTISEMENT

ಗೌರವಾಧ್ಯಕ್ಷ ಕೆ.ವಿಜಯ ಗೌಡ ವೇಣೂರು ಮಾತನಾಡಿ, ‘ಈ ರೀತಿಯ ಬೆಳವಣಿಗೆಯಿಂದ ಮಠಗಳ ಮಧ್ಯೆ ಹಾಗೂ ಗೌಡ ಸಮುದಾಯವನ್ನು ಒಡೆಯುವ ಹುನ್ನಾರ ಕೆಲ ವ್ಯಕ್ತಿಗಳಿಂದ ನಡೆಯುತ್ತಿದೆ. ಇದನ್ನು ಗೌಡ ಸಮುದಾಯ ಎಂದಿಗೂ ಒಪ್ಪುವುದಿಲ್ಲ. ಒಂದು ವೇಳೆ ಸಮುದಾಯದ ಸ್ವಾಮೀಜಿಯನ್ನು ಕರೆಸದೆ ಕೇವಲ ಶೃಂಗೇರಿ ಶ್ರೀಗಳನ್ನು ಕರೆಸಿದ್ದೇ ಆದಲ್ಲಿ ಇದನ್ನು ನಾವು ಖಂಡಿಸುತ್ತೇವೆ ಜತೆಗೆ ಕಾರ್ಯಕ್ರಮವನ್ನು ಭಹಿಷ್ಕರಿಸುತ್ತೇವೆ’ ಎಂದರು.

ಮೇ 25ರಂದು ಪದಗ್ರಹಣ
ಬೆಳ್ತಂಗಡಿ ತಾಲ್ಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಈಗಾಗಲೇ ಅಸ್ತಿತ್ವದಲ್ಲಿದ್ದು, ಮೇ 25ರಂದು ಲಾಯಿಲ ಸಂಗಮ ಸಭಾಭವನದಲ್ಲಿ ಪದಗ್ರಹಣ ನಡೆಯಲಿದೆ. ಅಂದು ಸಮಾಜದ 50 ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಆಂಬುಲೆನ್ಸ್‌ ಲೋಕಾರ್ಪಣೆ ನಡೆಯಲಿದೆ ಎಂದು ಮೋಹನ್ ಗೌಡ ಕಲ್ಮಂಜ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.