ADVERTISEMENT

ಅಶ್ರಫ್ ಹತ್ಯೆ: ನ್ಯಾಯ, ಪರಿಹಾರಕ್ಕೆ ಕೇರಳದಾದ್ಯಂತ ಕೂಗು

ಮಲಪ್ಪುರಂ ಜಿಲ್ಲೆಯ ಪರಪ್ಪೂರ್‌ನಲ್ಲಿ ಕ್ರಿಯಾ ಸಮಿತಿ ರಚನೆ; ಕರ್ನಾಟಕದ ಮೇಲೆ ಒತ್ತಡಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಮೇ 2025, 0:00 IST
Last Updated 3 ಮೇ 2025, 0:00 IST
   

ಮಂಗಳೂರು: ನಗರ ಹೊರವಲಯದ ಕುಡುಪುವಿನಲ್ಲಿ ಗುಂಪು ಹಲ್ಲೆಗೆ ಒಳಗಾಗಿ ಕೊಲೆಯಾದ ವಯನಾಡ್‌ ಜಿಲ್ಲೆ ಪುಲ್ಪಳ್ಳಿಯ ಮೊಹಮ್ಮದ್ ಅಶ್ರಫ್‌ ಕುಟುಂಬದವರಿಗೆ ಕರ್ನಾಟಕ ಸರ್ಕಾರ ನೆರವಾಗಬೇಕೆಂದು ಕೇರಳದಾದ್ಯಂತ ಕೂಗು ಎದ್ದಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಕ್ರಿಯಾ ಸಮಿತಿ ರಚಿಸಲಾಗಿದೆ. 

ಏಪ್ರಿಲ್ 27ರಂದು ಸಂಜೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪದ ಮೈದಾನದಲ್ಲಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಅಶ್ರಫ್‌ ಮೇಲೆ ಗುಂಪು ಹಲ್ಲೆ ಮಾಡಿ ಕೊಲೆಮಾಡಲಾಗಿತ್ತು. ಕೊಲೆಯಾದ ವ್ಯಕ್ತಿ ವಯನಾಡ್‌ನ ಅಶ್ರಫ್‌ ಎಂದು 29ರಂದು ಸಂಜೆ ಖಚಿತವಾಗಿತ್ತು. 30ರಂದು ಅಶ್ರಫ್‌ ಕುಟಂಬದ ಮೂಲ, ಮಲಪ್ಪುರಂ ಜಿಲ್ಲೆಯ ಕೋಟ್ಟಕ್ಕಲ್‌ ಪರಪ್ಪೂರ್ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಅಂದಿನಿಂದ ಕೇರಳದ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ರಫ್‌ಗೆ ನ್ಯಾಯ ಸಿಗಬೇಕು ಮತ್ತು ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಕೂಗು ಎದ್ದಿತ್ತು. ಶುಕ್ರವಾರ ಸಿಪಿಎಂ, ಕಾಂಗ್ರೆಸ್ ಮತ್ತು ಇಂಡಿಯನ್ ನ್ಯಾಷನಲ್ ಮುಸ್ಲಿಂ ಲೀಗ್‌ (ಐಯುಎಂಎಲ್‌) ಮುಖಂಡರು ಅಶ್ರಫ್‌ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ.

ADVERTISEMENT

‘ಸಿಪಿಎಂ ಪುಲ್ಪಳ್ಳಿ ವಲಯ ಕಾರ್ಯದರ್ಶಿ ಎಂ.ಎಸ್‌ ಸುರೇಶ್ ಬಾಬು, ಮುಖಂಡರಾದ ಬೈಜು, ಪಿ.ಎ ಮೊಹಮ್ಮದ್‌, ಕಾಂಗ್ರೆಸ್ ಶಾಸಕ ಕೆ.ಬಾಲಕೃಷ್ಣನ್‌, ಐಯುಎಂಎಲ್ ನೇತಾರ ಸಿ.ಕೆ ಸುಬೇರ್‌ ಮುಂತಾದವರು ಮನೆಗೆ ಬಂದಿದ್ದಾರೆ. ತನಿಖೆಯನ್ನು ಚುರುಕುಗೊಳಿಸಲು ನೆರವಾಗುವುದಾಗಿಯೂ ಸರ್ಕಾರಗಳ ಕಡೆಯಿಂದ ಪರಿಹಾರ ಸಿಗುವಂತೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ’ ಎಂದು ಅಶ್ರಫ್‌ ಅವರ ಕಿರಿಯ ಸಹೋದರ ಅಬ್ದುಲ್ ಜಬ್ಬಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕ ಸರ್ಕಾರದ ಮೇಲೆ ಒತ್ತಡ

ಅಶ್ರಫ್ ಕುಟುಂಬದ ಮೂಲ ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್‌. ಸಾಲದಿಂದ ಮನೆ ಜಪ್ತಿಯಾದ ಕಾರಣ ಈಚೆಗೆ ವಯನಾಡಿಗೆ ಬಂದಿದ್ದರು. ಕೋಟಕ್ಕಲ್‌ನಲ್ಲಿ ಈಗ ದೊಡ್ಡಮಟ್ಟದ ಹೋರಾಟ ರೂಪಿಸಲಾಗುತ್ತಿದೆ. ಕಾಂಗ್ರೆಸ್‌ ಪರಪ್ಪೂರ್ ಬ್ಲಾಕ್ ಅಧ್ಯಕ್ಷ ನಾಸರ್ ಕುಟ್ಟಿಕಾಟಿಲ್ ಅಧ್ಯಕ್ಷತೆಯಲ್ಲಿ ಮೇ 1ರಂದು ಕ್ರಿಯಾಸಮಿತಿ ರೂಪಿಸಲಾಗಿದ್ದು ಐಯುಎಂಎಲ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ ಕುಂಞಾಲಿಕುಟ್ಟಿ ನೇತೃತ್ವ ವಹಿಸಿದ್ದಾರೆ. 

‘ಅಶ್ರಫ್‌ ಕೊಲೆಗೆ ಸಂಬಂಧಿಸಿದ ತನಿಖಾ ಪ್ರಕ್ರಿಯೆ ಸರಿಯಾದ ದಾರಿಯಲ್ಲಿ ಸಾಗಬೇಕು, ಅವರ ಕುಟುಂಬಕ್ಕೆ ಪರಿಹಾರ ಸಿಗಬೇಕು ಎಂಬುದು ಕ್ರಿಯಾಸಮಿತಿಯ ಪ್ರಮುಖ ಬೇಡಿಕೆ. ಘಟನೆ ಕರ್ನಾಟಕದಲ್ಲಿ ನಡೆದಿರುವುದರಿಂದ ಕರ್ನಾಟಕ ಸರ್ಕಾರವೇ ಪರಿಹಾರಕ್ಕೆ ಮುಂದಾಗಬೇಕು. ಇದಕ್ಕಾಗಿ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು’ ಎಂದು ನಾಸರ್ ಕುಟ್ಟಿಕಾಟ್ಟಿಲ್‌ ತಿಳಿಸಿದರು. 

‘ಕೇರಳಕ್ಕೆ ಸಂಬಂಧಿಸಿ ಇದೊಂದು ಅಪರೂಪದ ಪ್ರಕರಣ. ಆದ್ದರಿಂದ ಇದಕ್ಕೆ ಸಂಬಂಧಿಸಿ ಸಮರ್ಪಕ ಹೋರಾಟ ನಡೆಯಬೇಕಾಗಿದೆ. ಅಶ್ರಫ್ ಅವರ ಕುಟಂಬ ತೀರಾ ಸಂಕಷ್ಟದಲ್ಲಿದೆ. ಆದರೆ ವೈಯಕ್ತಿಕವಾಗಿ ಯಾರಿಂದಲೂ ಆರ್ಥಿಕ ನೆರವು ಪಡೆಯುವ ಜಾಯಮಾನದವರಲ್ಲ. ಈ ಕಾರಣದಿಂದ ಸರ್ಕಾರವೇ ಅವರಿಗೆ ಪರಿಹಾರ ನೀಡಬೇಕಾಗಿದೆ. ಶಾಸಕ ಎ.ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಕೆ.ಸಿ ವೇಣುಗೋಪಾಲ್ ಮೂಲಕ ಕರ್ನಾಟಕ ಸರ್ಕಾರಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು. 

‘ಕೇರಳದ ಸಹಜ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ’

ಇಂಥ ಘಟನೆಗಳು ನಡೆದಾಗ ಸಾಮಾನ್ಯವಾಗಿ ಕೇರಳದಲ್ಲಿ ಎಲ್ಲ ಭೇದ ಮರೆತು ಜನರು ಒಂದಾಗುತ್ತಾರೆ. ಆದರೆ ಅಶ್ರಫ್ ಪ್ರಕರಣದಲ್ಲಿ ಸಹಜವಾದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಶತ್ರುರಾಷ್ಟ್ರದ ಪರವಾಗಿ ಘೋಷಣೆ ಕೂಗಿದರೆ ಕೊಲೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ಭಾರತದ ಮೇಲೆ ದಾಳಿ ಮಾಡಿದ ಕಸಬ್‌ಗೆ ಕೂಡ ವಿಚಾರಣೆಗೆ ಒಳಪಡಿಸಿದ ನಂತರವಷ್ಟೇ ಶಿಕ್ಷೆ ನೀಡಿದ್ದು. ಆ ದೃಷ್ಟಿಯಲ್ಲಿ ನೋಡಿದರೆ ಅಶ್ರಫ್ ಮೇಲೆ ನಡೆದದ್ದು ಅತ್ಯಂತ ಅಮಾನವೀಯ ಕೃತ್ಯ. ಇದಕ್ಕೆ ಮಾನವೀಯ ನೆಲೆಯಲ್ಲಿ ಪ್ರತಿಕ್ರಿಯೆ ನೀಡಲು ಎಲ್ಲರೂ ಬದ್ಧರಾಗಬೇಕು - ಸಹೀದ್‌ ರೂಮಿ, ವಕೀಲ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.