ADVERTISEMENT

ವೆನ್ಲಾಕ್‌ಗೆ ಹೆಚ್ಚುವರಿ ವೆಂಟಿಲೇಟರ್‌ ವ್ಯವಸ್ಥೆ

ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಆಗದಂತೆ ಕ್ರಮ: ನಳಿನ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 8 ಮೇ 2021, 5:06 IST
Last Updated 8 ಮೇ 2021, 5:06 IST
ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ನಳಿನ್‌ಕುಮಾರ್ ಕಟೀಲ್‌, ಆಮ್ಲಜನಕ ಟ್ಯಾಂಕ್‌ ಕಾಮಗಾರಿ ವೀಕ್ಷಿಸಿದರು.
ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ನಳಿನ್‌ಕುಮಾರ್ ಕಟೀಲ್‌, ಆಮ್ಲಜನಕ ಟ್ಯಾಂಕ್‌ ಕಾಮಗಾರಿ ವೀಕ್ಷಿಸಿದರು.   

ಮಂಗಳೂರು: ಜಿಲ್ಲೆಯ ವೆನ್ಲಾಕ್‌ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ನಗರದ ವೆನ್ಲಾಕ್‌ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮ್ಲಜನಕಕ್ಕೆ ಸಂಬಂಧಿಸಿದಂತೆ ವೆನ್ಲಾಕ್‌ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ 6 ಸಾವಿರ ಕಿ.ಲೀ. ಸಾಮರ್ಥ್ಯದ ಆಮ್ಲಜನಕ ಸಂಗ್ರಹ ವ್ಯವಸ್ಥೆ ಇದೆ. ಹೆಚ್ಚುವರಿಯಾಗಿ ಇನ್ನೂ 6 ಸಾವಿರ ಕಿ.ಲೀ. ಸಾಮರ್ಥ್ಯದ ಟ್ಯಾಂಕ್‌ ನಿರ್ಮಾಣ ಮಾಡಲಾಗುವುದು. ಜೊತೆಗೆ ಎಂಆರ್‌ಪಿಎಲ್‌ನಿಂದ 930 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೈಗಾರಿಕೆಗಳ ಸಿಎಸ್‌ಆರ್‌ ಅನುದಾನದಡಿ ತಾಲ್ಲೂಕು ಆಸ್ಪತ್ರೆಗಳಲ್ಲೂ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ ವೆನ್ಲಾಕ್‌ನಲ್ಲಿ 70 ವೆಂಟಿಲೇಟರ್‌ಗಳಿದ್ದು, ಹೆಚ್ಚುವರಿಯಾಗಿ 18 ವೆಂಟಿಲೇಟರ್‌ಗಳು ಶೀಘ್ರದಲ್ಲಿಯೇ ಬರಲಿವೆ. ಇನ್ನಷ್ಟು ವೆಂಟಿಲೇಟರ್‌ ಕಳುಹಿಸಲು ರಾಜ್ಯ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಆಗದಿರಲು, ಕೆಲ ವೆಂಟಿಲೇಟರ್‌ಗಳನ್ನು ಬಡ ರೋಗಿಗಳಿಗೆ ಮಾತ್ರ ಉಪಯೋಗಿಸುವ ಷರತ್ತಿನೊಂದಿಗೆ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುವುದು ಎಂದರು.

ಸದ್ಯಕ್ಕೆ ಜಿಲ್ಲೆಗೆ ಸಮರ್ಪಕ ಆಮ್ಲಜನಕದ ಪೂರೈಕೆ ಆಗುತ್ತಿದೆ. ಈ ಬಗ್ಗೆ ಜಿಂದಾಲ್‌ ಕಂಪನಿಗೂ ಪತ್ರ ಬರೆದಿದ್ದೇನೆ. ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಆಗುವುದಿಲ್ಲ. ಇದರ ಜೊತೆಗೆ ಹೆಚ್ಚುವರಿಯಾಗಿ ಆಮ್ಲಜನಕದ ಸಂಗ್ರಹ, ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣ ಮಾಡುವ ಮೂಲಕ ಆಮ್ಲಜನಕದ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ತಾಲ್ಲೂಕುಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ರೋಗ ಲಕ್ಷಣ ಇಲ್ಲದವರು ಹೋಂ ಐಸೋಲೇಷನ್‌ನಲ್ಲಿದ್ದರೆ, ಲಘು ಲಕ್ಷಣಗಳು ಇದ್ದವರಿಗೆ ಈ ಕೇಂದ್ರಗಳಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಕೆಐಒಸಿಎಲ್‌ನಿಂದ ಮೂಡುಬಿದಿರೆ ಮತ್ತು ಬೆಳ್ತಂಗಡಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯದ ತಲಾ 50 ಹಾಸಿಗೆಯನ್ನು ವ್ಯವಸ್ಥೆ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ವೆಂಟಿಲೇಟರ್ ಒದಗಿಸುವುದಾಗಿ ಭರವಸೆ ನೀಡಿದೆ ಎಂದರು.

ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಡಿಎಚ್ಒ ಡಾ.ಕಿಶೋರ್, ವೆನ್ಲಾಕ್ ಅಧೀಕ್ಷಕ ಡಾ.ಸದಾಶಿವ ಶ್ಯಾನುಭೋಗ್, ಅಧಿಕಾರಿಗಳು ಇದ್ದರು.

ಬೆಡ್‌ ಬ್ಲಾಕಿಂಗ್‌: ತಪ್ಪಿತಸ್ಥರಿಗೆ ಶಿಕ್ಷೆ
ಬೆಂಗಳೂರಿನಲ್ಲಿ ನಡೆದಿರುವ ಬೆಡ್‌ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಈ ಪ್ರಕರಣಕ್ಕೆ ಬೇರೆ ಬಣ್ಣ ನೀಡುವ ಅಗತ್ಯವಿಲ್ಲ. ತನಿಖೆ ನಡೆಯುತ್ತಿದೆ. ತನಿಖಾ ವರದಿಯಿಂದ ಸತ್ಯ ಹೊರಗೆ ಬರಲಿದೆ. ಅಲ್ಲಿಯವರೆಗೆ ಕಾಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.