ADVERTISEMENT

'ಜಾಹೀರಾತು ಬಿಲ್: ₹126 ಕೋಟಿ ಬಾಕಿ'

ಕೆಎಸ್‌ಎಂಸಿಎಎಲ್ ಕಚೇರಿ ಉದ್ಘಾಟಿಸಿದ ಅಧ್ಯಕ್ಷ ಸತೀಶ್ ಸೈಲ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 14:45 IST
Last Updated 27 ಜೂನ್ 2025, 14:45 IST
ಮಂಗಳೂರಿನಲ್ಲಿ ಕೆಎಸ್‌ಎಂಸಿಎಎಲ್ ನೂತನ ಕಚೇರಿ ಉದ್ಘಾಟಿಸಿದ ಅಧ್ಯಕ್ಷ ಸತೀಶ್ ಸೈಲ್ ಮಾತನಾಡಿದರು
ಮಂಗಳೂರಿನಲ್ಲಿ ಕೆಎಸ್‌ಎಂಸಿಎಎಲ್ ನೂತನ ಕಚೇರಿ ಉದ್ಘಾಟಿಸಿದ ಅಧ್ಯಕ್ಷ ಸತೀಶ್ ಸೈಲ್ ಮಾತನಾಡಿದರು   

ಮಂಗಳೂರು: ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್‌ಗೆ (ಕೆಎಸ್‌ಎಂಸಿಎಎಲ್) ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳ ಜಾಹೀರಾತು ಬಿಲ್ ಮೊತ್ತ ಅಂದಾಜು ₹126 ಕೋಟಿ ಪಾವತಿ ಬಾಕಿ ಇದೆ ಎಂದು ಸಂಸ್ಥೆಯ ಅಧ್ಯಕ್ಷ ಸತೀಶ್ ಸೈಲ್ ಹೇಳಿದರು.

ನಗರದ ಯೆಯ್ಯಾಡಿಯಲ್ಲಿ ಸಂಸ್ಥೆಯ ನೂತನ ಕಚೇರಿ ಉದ್ಘಾಟಿಸಿ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಗರ ಅಭಿವೃದ್ಧಿ ಪ್ರಾಧಿಕಾರಗಳಿಂದ ₹73.41 ಕೋಟಿ, ನಗರ ಸ್ಥಳೀಯ ಸಂಸ್ಥೆಗಳಿಂದ ₹20.18 ಕೋಟಿ, ಲೋಕೋಪಯೋಗಿ ಇಲಾಖೆಯಿಂದ ₹11.73 ಕೋಟಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ₹5.59 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ₹4.33 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ₹4.26 ಕೋಟಿ, ಎಪಿಎಂಸಿ ₹1.39 ಕೋಟಿ ಮೊತ್ತ ವಸೂಲಿಯಾಗದೆ ಬಾಕಿ ಉಳಿದಿದೆ. 2002ರಿಂದ ಬಿಲ್ ಮೊತ್ತ ಬಾಕಿ ಇದ್ದು, ಸತತ ಪ್ರಯತ್ನದಿಂದ ಕಳೆದ 10 ತಿಂಗಳುಗಳಲ್ಲಿ ₹28 ಕೋಟಿ ವಸೂಲಿ ಮಾಡಲಾಗಿದೆ ಎಂದರು.

ADVERTISEMENT

ಈ ವಿಷಯವನ್ನು ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ ಗಮನಕ್ಕೆ ತರಲಾಗಿದೆ. ಸಂಸ್ಥೆಯು ಯಾವುದೇ ಬಿಲ್ ಅನ್ನು 60 ದಿನಗಳ ಒಳಗಾಗಿ ಜಾಹೀರಾತು ಪ್ರಕಟವಾದ ಪತ್ರಿಕೆ ಅಥವಾ ಮಾಧ್ಯಮಕ್ಕೆ ಬಿಡುಗಡೆ ಮಾಡುತ್ತದೆ. ಆದರೆ, ಇಲಾಖೆಗೆ ಬರುವ ಮೊತ್ತ ಮಾತ್ರ ಬಾಕಿಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದ 15 ಕಡೆಗಳಲ್ಲಿ ಸಂಸ್ಥೆ ಶಾಖೆಗಳನ್ನು ಹೊಂದಿದ್ದು, ಎಲ್ಲ ಕಡೆಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಡಿಸೆಂಬರ್ ಅಂತ್ಯದೊಳಗೆ ಗುದ್ದಲಿಪೂಜೆ ನೆರವೇರಿಸಲಾಗುವುದು. ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಸಹ ಶಾಖೆ ತೆರೆಯುವ ಉದ್ದೇಶವಿದೆ. ಜೈಪುರ, ನವದೆಹಲಿ, ಮುಂಬೈನಲ್ಲಿ ಈಗಾಗಲೇ ಶಾಖೆ ತೆರೆಯಲಾಗಿದೆ ಎಂದು ತಿಳಿಸಿದರು. ‌

2023–24ನೇ ಸಾಲಿನಲ್ಲಿ ₹412.12 ಕೋಟಿ, 2024–25ರಲ್ಲಿ ₹431.81 ಕೋಟಿ ವಹಿವಾಟು ನಡೆಸಲಾಗಿದೆ. ಕಂಪನಿಯ ಲಾಭದಲ್ಲಿ ₹5.28 ಕೋಟಿ ಲಾಭಾಂಶವನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗಿದೆ. 4ಜಿ ವಿನಾಯಿತಿಯನ್ನು ₹25 ಲಕ್ಷದಿಂದ ₹2 ಕೋಟಿಗೆ ವಿಸ್ತರಿಸಲಾಗಿದೆ ಎಂದು ಸೈಲ್ ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅತೀಕುಲ್ಲಾ ಶರೀಫ್, ಉಪ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕೇತರ) ಪಿ.ಎಸ್.ನಂದೀಶ, ಸ್ಥಳೀಯ ಕಚೇರಿಯ ವಿಶೇಷ ಅಧಿಕಾರಿ ಅನುರಾಧಾ ಶರತ್ ಇದ್ದರು.

ಮಂಗಳೂರಿನಲ್ಲಿ ಸ್ವಂತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕಾವೂರಿನಲ್ಲಿ 4.5 ಸೆಂಟ್ಸ್ ಜಾಗ ಗುರುತಿಸಲಾಗಿದ್ದು ₹2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು.

- ಸತೀಶ್ ಸೈಲ್ ಕೆಎಸ್‌ಎಂಸಿಎಎಲ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.