ADVERTISEMENT

ಸೇನಾ ನೇಮಕಾತಿಯ ಹೊರಗುತ್ತಿಗೆ ದೇಶ ವಿರೋಧಿ ಕೃತ್ಯ: ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 14:15 IST
Last Updated 27 ಜೂನ್ 2022, 14:15 IST
ರಮಾನಾಥ ರೈ
ರಮಾನಾಥ ರೈ   

ಮಂಗಳೂರು: ‘ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸುವ ಮೂಲಕ ದೇಶ ಕಾಯುವ ಸೇನೆಯ ನೇಮಕಾತಿಯನ್ನೂ ಹೊರಗುತ್ತಿಗೆ ನೀಡಲು ಈಗಿನ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ದೇಶ ವಿರೋಧಿ ಕೃತ್ಯ. ಇದನ್ನು ದೇಶದ ಯಾವ ದೇಶಪ್ರೇಮಿಗಳೂ ಒಪ್ಪಲಾರರು’ ಎಂದು ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸರ್ಕಾರ ಸಮರ್ಥಿಸಿಕೊಳ್ಳುವಂತೆ ಈ ಯೋಜನೆಯಿಂದ ನಿರುದ್ಯೋಗಿಗಳಿಗೆ ಯಾವ ಸಹಾಯವೂ ಆಗದು. ಸೇನೆಯ ಸಾಮರ್ಥ್ಯವೂ ವೃದ್ಧಿಯಾಗದು. ಈ ಯೋಜನೆ ವಿರುದ್ಧ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ’ ಎಂದು ತಿಳಿಸಿದರು.

‘ಸೇನೆಗೆ ಪ್ರತಿವರ್ಷವೂ 70 ಸಾವಿರ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಕೋವಿಡ್‌ ಕಾರಣದಿಂದಾಗಿ ‌‌‌‌ಎರಡು ವರ್ಷಗಳಿಂದ ಸೇನಾ ನೇಮಕಾತಿ ನಡೆಸಿಲ್ಲ. ಈ ಹಿಂದೆ ನಡೆದಿದ್ದ ನೇಮಕಾತಿ ಪ್ರಕ್ರಿಯೆಯಡಿ ವೈದ್ಯಕೀಯ ತಪಾಸಣೆಯಲ್ಲಿ ಯಶಸ್ವಿಯಾಗಿದ್ದ ಅನೇಕ ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದರು. ಆ ಪ್ರಕ್ರಿಯೆಗಳನ್ನೇ ರದ್ದು ಮಾಡಿ, ಅಗ್ನಿಪಥ ಯೋಜನೆ ಜಾರಿಗೆ ತರುವ ಮೂಲಕ ಸರ್ಕಾರ, ಆ ಅಭ್ಯರ್ಥಿಗಳಲ್ಲಿ ಆಘಾತ ಮೂಡಿಸಿದೆ’ ಎಂದರು.
‘ಸತತ 5 ವರ್ಷ ಸೇವೆ ಸಲ್ಲಿಸುವ ಸರ್ಕಾರಿ ಉದ್ಯೋಗಿಗೆ ಪಿಂಚಣಿ ಹಾಗೂ ಇತರ ಸವಲತ್ತುಗಳನ್ನು ನೀಡಬೇಕಾಗುತ್ತದೆ. ಸೇನೆಗೆ ಸೇರುವ ಯುವಕರಿಗೆ ಈ ಸವಲತ್ತುನೀಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಅವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಆ ಬಳಿಕ ಅವರಿಗೆ ಭದ್ರತಾ ಸಿಬ್ಬಂದಿ ಸಿಗುತ್ತದೆ ಎಂದು ಕೆಲವರು ತಮಾಷೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸೈನ್ಯಕ್ಕೆ ಮಾಡುವ ಅವಮಾನ’ ಎಂದರು.

ADVERTISEMENT

‘ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ಕಾರ್ಯನಿರ್ವಹಿಸುವವರಿಗೆ ನಿವೃತ್ತ ಸೈನಿಕರಿಗೆ ಸಿಗುವ ಕ್ಯಾಂಟೀನ್‌, ವೈದ್ಯಕೀಯ ಚಿಕಿತ್ಸೆಯ ನೆರವು ಮೊದಲಾದ ಸೌಲಭ್ಯಗಳು ಸಿಗುವುದಿಲ್ಲ. ಸೈನಿಕರ ಬ್ಯಾಜ್ ಅನ್ನೂ ಇವರಿಗೆ ನೀಡುವುದಿಲ್ಲ’ ಎಂದರು.

‘ಬಿಜೆಪಿಯು ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಯಾವುದೇ ಭರವಸೆಯನ್ನಾದರೂ ಈಡೇರಿಸಿದೆಯೇ‘ ಎಂದರು ಅವರು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಜಯಶೀಲ ಅಡ್ಯಂತಾಯ, ಶಾಲೆಟ್ ಪಿಂಟೊ, ಹರಿನಾಥ್ ಬೋಂದೆಲ್, ನೀರಜ್‌ಪಾಲ್, ನವೀನ್ ಡಿಸೋಜ, ಅಪ್ಪಿ ಮೊದಲಾದವರು ಇದ್ದರು.

‘ತುರ್ತು ಪರಿಸ್ಥಿತಿ ರಕ್ತರಹಿತ ಕ್ರಾಂತಿ’

‘ತುರ್ತು ಪರಿಸ್ಥಿತಿ ಘೋಷಣೆಯನ್ನು ನಾನು ಸಮರ್ಥಿಸುವುದಿಲ್ಲ. ಆದರೆ, ಇದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆ ಆಗಿಲ್ಲ. ಅದೊಂದು ರೀತಿಯ ರಕ್ತರಹಿತ ಕ್ರಾಂತಿ. ಉಳುವವನೆ ಭೂಮಿಯ ಒಡೆಯ ಕಾಯ್ದೆ, ಋಣ ಪರಿಹಾರ ಕಾಯ್ದೆಯಂತಹ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳು ಜಾರಿಯಾಗಿದ್ದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇ. ಇದನ್ನು ವಿರೋಧಿಸಿದ್ದು ಭೂಮಿಯನ್ನು ಕಳೆದುಕೊಂಡ ಜಮೀನ್ದಾರರು. ಬಡವರು ಯಾರೂ ಈ ಹೋರಾಟದಲ್ಲಿ ಜೈಲಿಗೆ ಹೋಗಿಲ್ಲ’ ಎಂದು ರಮಾನಾಥ ರೈ ಅಭಿಪ್ರಾಯಪಟ್ಟರು.

‘ಬಿಜೆಪಿ ಮುಖಂಡರು ಈಗ ತುರ್ತು ಪರಿಸ್ಥಿತಿಯ ಬಗ್ಗೆ ಈಗ ಟೀಕಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಸಾಮಾಜಿಕ ಹೋರಾಟಗಾರರನ್ನು ಬಂಧನದಲ್ಲಿಡುವುದು ಹೆಚ್ಚುತ್ತಿದೆ. ಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ಮೇಲೂ ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 40 ಅಭ್ಯರ್ಥಿಗಳಿಗೆ ಈ ರೀತಿ ಕಿರುಕುಳ ನೀಡಲಾಗಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿ ಅಲ್ಲವೇ. ಇದು ಹಿಟ್ಲರ್‌ಶಾಹಿ ಆಡಳಿತವಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.