ADVERTISEMENT

‘ಬಿಜೆಪಿಗೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:22 IST
Last Updated 5 ಏಪ್ರಿಲ್ 2022, 4:22 IST

ಮಂಗಳೂರು: ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಗೆ ಬಿಜೆಪಿ ಹಾಗೂ ಸಹ ಸಂಘಟನೆಗಳು ಕಾರಣವಾಗಿವೆ. ರಾಜ್ಯ ಸರ್ಕಾರ ತನ್ನ ಹೊಣೆ ಅರಿತು, ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಇರಲು ಅರ್ಹತೆ ಇಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಆರೋಪಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಜಾಬ್ ವಿವಾದ, ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಒಂದು ಸಮುದಾಯದವರಿಗೆ ನಿಷೇಧ, ಶಾಲೆಗಳಲ್ಲಿ ಭಗವದ್ಗೀತೆ, ಹಲಾಲ್ ಕಟ್, ಜಟ್ಕಾ ಕಟ್ ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಶಾಸಕರು, ಸಚಿವರೇ ನೀಡುತ್ತಿದ್ದಾರೆ. ಈ ರೀತಿ ಕೋಮು ದ್ವೇಷಕ್ಕೆ ಬೆಂಬಲ ನೀಡುವ, ಸಮಾಜ ಒಡೆಯುವ ಸಂಸ್ಕೃತಿ ಯಾವತ್ತೂ ಇರಲಿಲ್ಲ’ ಎಂದರು.

ಒಂದು ಧರ್ಮವನ್ನು ಎತ್ತಿ ಹಿಡಿದು, ಸಮಾಜದಲ್ಲಿ ಒಡಕು ಮೂಡಿಸುವುದರಿಂದ ಲಾಭವಾಗಬಹುದು ಎಂಬ ಭಾವನೆ ಬಿಜೆಪಿಗೆ ಇದ್ದರೆ, ಅದು ತಪ್ಪು. ಪ್ರಜ್ಞಾವಂತ ಸಮಾಜದ ಜನರಿಗೆ ಎಲ್ಲವೂ ಅರಿವಾಗುತ್ತದೆ. ಇಂತಹ ಕೃತ್ಯಗಳ ಮೂಲಕ ಬಿಜೆಪಿ ತನಗೆ ತಾನೇ ಗಂಡಾಂತರವನ್ನು ಸೃಷ್ಟಿಸಿಕೊಳ್ಳುತ್ತಿದೆ ಎಂದರು.

ADVERTISEMENT

ಸಿ.ಎಂ. ಮುಸ್ತಫ, ದೀಕ್ಷಿತ್ ಅತ್ತಾವರ, ಮೀನಾ ಟೆಲ್ಲಿಸ್, ಚಿತ್ತರಂಜನ್, ಹುಸೇನ್ ಕೂಳೂರು, ಅಶಿತ್ ಪಿರೇರಾ, ಅಲ್ವಿನ್ ಡಿಕುನ್ಹ, ಹಸನ್ ಫಳ್ನೀರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.