ಪ್ರಜಾವಾಣಿ ವಾರ್ತೆ
ಕಡಬ (ಉಪ್ಪಿನಂಗಡಿ):
ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಆರೋಪಿಸಿ ಅಕ್ರಮ ಸಕ್ರಮ ಸಮಿತಿ ಸದಸ್ಯರು, ಸಚಿವ ಎಸ್. ಅಂಗಾರ ಎದುರೇ ‘ಅರ್ಹ ಕಡತಗಳನ್ನು ಅನಗತ್ಯವಾಗಿ ತಡೆಹಿಡಿದು ದುಡ್ಡಿಗಾಗಿ ಬಡವರ ರಕ್ತ ಹೀರುತ್ತಿದ್ದೀರಿ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಕಡಬದಲ್ಲಿ ನಡೆಯಿತು.
ಕಡಬ ತಾಲ್ಲೂಕಿನ ಅಕ್ರಮ-ಸಕ್ರಮ ಸರ್ಕಾರಿ ಕೃಷಿ ಜಮೀನುಗಳ ಸಕ್ರಮೀಕರಣ ಸಭೆ ಸಚಿವ ಎಸ್. ಅಂಗಾರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿದ್ದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಅಕ್ರಮ ಸಕ್ರಮ ಕಡತವೊಂದರ ಮಂಜೂರಾತಿ ಬಾಕಿ ಬಗ್ಗೆ ಪ್ರಸ್ತಾಪಿಸಿದರು. ಅದರ ಮಂಜೂರಾತಿಗೆ ಕಾನೂನು ತೊಡಕು ಇದೆ ಎಂದು ತಹಶೀಲ್ದಾರ್ ಅನಂತಶಂಕರ್ ಹೇಳಿದರು. ಅಕ್ರೋಶಗೊಂಡ ಕೃಷ್ಣ ಶೆಟ್ಟಿ ‘ಕಾನೂನು ಬಾಹಿರವಾಗಿ ಎಷ್ಟು ಕಡತಗಳನ್ನು ಹಣ ಪಡೆದು ಮಾಡಿಕೊಟ್ಟಿದ್ದೀರಿ ಎಂದು ನನಗೆ ಗೊತ್ತಿದೆ. ಅರ್ಹ ಕಡತಗಳನ್ನು ಅನಾವಶ್ಯಕವಾಗಿ ತಡೆ ಹಿಡಿದು ದುಡ್ಡಿಗೋಸ್ಕರ ಬಡವರ ರಕ್ತ ಹೀರುತ್ತೀರಿ’ ಎಂದು ವಾಗ್ದಾಳಿ ನಡೆಸಿದರು.
ಸದಸ್ಯ ರಾಕೇಶ್ ರೈ ಕೆಡೆಂಜಿ, ‘ಕಡತಗಳನ್ನು ಪೂರ್ವಾಗ್ರಹ ಪೀಡಿತವಾಗಿ ತಡೆಹಿಡಿಯಲಾಗುತ್ತಿದೆ’ ಎಂದು ದೂರಿದರು.
‘ಗೋಳಿತೊಟ್ಟು ಗ್ರಾಮದ ಗಣೇಶ್ ಬೊಟ್ಟಿಮಜಲು ಎಂಬುವರ ವಿರುದ್ಧ ವೈಯಕ್ತಿಕ ದ್ವೇಷ ಇಟ್ಟುಕೊಂಡು ಕಡತ ಮಂಜೂರು ಹಂತಕ್ಕೆ ಬಿಡಲಿಲ್ಲ. ಈಗ ಕೇಳಿದರೆ ಕಾನೂನು ತೊಡಕು ಹೇಳುತ್ತೀರಿ, ಆದರೆ ಅದೇ ಸರ್ವೆ ಸಂಖ್ಯೆಯಲ್ಲಿ ಇತರರ ಅರ್ಜಿ ಹೇಗೆ ಸಕ್ರಮಗೊಂಡಿದೆ’ ಎಂಬುದಕ್ಕೆ ದಾಖಲೆ ನೀಡಬೇಕು. ‘ಕೆಲವು ಸಿಬ್ಬಂದಿ ಹಣ ಪಡೆದು, ಕೆಲಸವನ್ನೂ ಮಾಡಿಕೊಡದ ಬಗ್ಗೆ ದೂರುಗಳಿವೆ’ ಎಂದರು.
ಸಭೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ, ಉಪ ತಹಸೀಲ್ದಾರ್ಗಳಾದ ಮನೋಹರ ಕೆ.ಟಿ., ಗೋಪಾಲ ಕಲ್ಲುಗುಡ್ಡೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.