ADVERTISEMENT

’ತೆಂಕು ತಿಟ್ಟಿಗೆ ಗೌರವ ತಂದ ಕಲಾವಿದ’

ಅಳಿಕೆ ರಾಮಯ್ಯ ರೈ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 12:48 IST
Last Updated 14 ಏಪ್ರಿಲ್ 2019, 12:48 IST
ಮಂಗಳೂರಿನಲ್ಲಿ ಶನಿವಾರ ಪುಂಡುವೇಷಧಾರಿಗಳಾದ ಮಾಡಾವು ಕೊರಗಪ್ಪ ರೈ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ 2018-19 ನೇ ಸಾಲಿನ ‘ಅಳಿಕೆ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಮಂಗಳೂರಿನಲ್ಲಿ ಶನಿವಾರ ಪುಂಡುವೇಷಧಾರಿಗಳಾದ ಮಾಡಾವು ಕೊರಗಪ್ಪ ರೈ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ 2018-19 ನೇ ಸಾಲಿನ ‘ಅಳಿಕೆ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.   

ಮಂಗಳೂರು: 'ತಂತ್ರಜ್ಞಾನಗಳ ಯುಗಾರಂಭವಾಗುವ ಮೊದಲೇ ಯಕ್ಷಾಗಾನದಂತಹ ಸಾಂಪ್ರದಾಯಿಕ ರಂಗ ಕಲೆಯನ್ನು ಎತ್ತರಕ್ಕೆ ಬೆಳೆಸಿದವರು ಅಂದಿನ ಶ್ರೇಷ್ಠ ಕಲಾವಿದರು. ಅಳಿಕೆ ರಾಮಯ್ಯ ರೈ ಅಂತಹ ಒಬ್ಬ ಪ್ರಾತಿನಿಧಿಕ ಕಲಾವಿದ. ಅವರು ತೆಂಕುತಿಟ್ಟು ಯಕ್ಷಗಾನಕ್ಕೆ ಗೌರವ ತಂದುಕೊಟ್ಟ ಉತ್ಕೃಷ್ಟ ಕಲಾಕಾರ ಎಂದು ಹಿರಿಯ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.

ನಗರದ ಮಂಗಳಾದೇವಿ ದೇವಸ್ಥಾನದ ಕಲಾಮಂಟಪದಲ್ಲಿ ಶನಿವಾರ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್, 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಆಶ್ರಯದಲ್ಲಿ ನಡೆದ 'ಅಳಿಕೆ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.

'ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ದಿ.ಅಳಿಕೆಯವರು ಚಿತ್ರಿಸಿದ ಕೆಲವು ಪಾತ್ರಗಳು ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಿವೆ. ಅವು ನಮ್ಮ ಯುವ ಕಲಾವಿದರಿಗೆ ಮಾದರಿಯಾಗಬೇಕು' ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಳಿಕೆ ಸಹಾಯ ನಿಧಿ - ಪ್ರಶಸ್ತಿ ಪ್ರದಾನ: ಯಕ್ಷಗಾನದ ಇಬ್ಬರು ಹಿರಿಯ ಪುಂಡುವೇಷಧಾರಿಗಳಾದ ಮಾಡಾವು ಕೊರಗಪ್ಪ ರೈ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ 2018-19ನೇ ಸಾಲಿನ ‘ಅಳಿಕೆ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅಭಿನಂದಿಸಿದರು. ಯಕ್ಷಾಂಗಣದ ಸದಸ್ಯರಾದ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಮತ್ತು ಉಮೇಶಾಚಾರ್ಯ ಗೇರುಕಟ್ಟೆ ಸನ್ಮಾನ ಪತ್ರ ವಾಚಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ, ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ, ಯಕ್ಷಗಾನ ಸಂಘಟಕ ಮತ್ತು ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್ ಪದಾಧಿಕಾರಿಗಳಾದ ಅಳಿಕೆ ಚಂದ್ರಹಾಸ ಶೆಟ್ಟಿ, ಮಹಾಬಲ ರೈ ಬಜನಿಗುತ್ತು, ಮಹೇಶ್ ಶೆಟ್ಟಿ, ಉಷಾ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.

ಅಳಿಕೆ ರಾಮಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಟ್ರಸ್ಟಿ ಅಳಿಕೆ ಬಾಲಕೃಷ್ಣ ಶೆಟ್ಟಿ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಪ್ರಶಾಂತ ರೈ ಮುಂಡಾಳ ಮತ್ತು ಡಾ.ಪ್ರಖ್ಯಾತ್ ಶೆಟ್ಟಿ ಅಳಿಕೆ ಅವರ ಭಾಗವತಿಕೆಯಲ್ಲಿ 'ವಾಲಿ ಮೋಕ್ಷ' ಯಕ್ಷಗಾನ ತಾಳಮದ್ದಳೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.