ADVERTISEMENT

ಕಾಲೇಜಿನ ವಿದ್ಯಾರ್ಥಿನಿಯರ ಸಾವಿನ ಪ್ರಕರಣ: ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 16:29 IST
Last Updated 5 ಅಕ್ಟೋಬರ್ 2018, 16:29 IST

ಮಂಗಳೂರು: ‘ಮೂಡಬಿದಿರೆಯ ಆಳ್ವಾಸ್ ವಸತಿ ಕಾಲೇಜಿನ ವಿದ್ಯಾರ್ಥಿನಿಯರಾದ ಕಾವ್ಯ ಪೂಜಾರಿ ಹಾಗೂ ರಚನಾ ಮಂಜುನಾಥ್ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ತನಿಖೆಯಲ್ಲಿ ಪೊಲೀಸರ ವೈಫಲ್ಯಗಳೇನಿವೆ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ’ ಎಂದು ಅರ್ಜಿದಾರರಿಗೆ ಹೈಕೋರ್ಟ್‌ ಸೂಚಿಸಿದೆ.

‘ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿ ಮೃತ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲ ವಿ.ಶ್ರೀನಿಧಿ, ‘ತನಿಖೆಯ ಎಲ್ಲ ಆಯಾಮಗಳನ್ನೂ ಸಮರ್ಪಕವಾಗಿ ಕೈಗೊಳ್ಳಲಾಗಿದೆ. ವಿಧಿ ವಿ‌ಜ್ಞಾನ ಪ್ರಯೋಗಾಲಯದ ವರದಿ ನಿರೀಕ್ಷೆ ಮಾಡಲಾಗುತ್ತಿದೆ’ ಎಂದು ತನಿಖೆಯ ವಸ್ತುಸ್ಥಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಲು ಮುಂದಾದರು.

ADVERTISEMENT

ಇದನ್ನು ಸ್ವೀಕರಿಸದ ನ್ಯಾಯಪೀಠ, ‘ಪೊಲೀಸರ ಕೈಗೊಂಡಿರುವ ತನಿಖೆಯಲ್ಲಿ ಎಲ್ಲಿ ಲೋಪಗಳಿವೆ ಎಂಬ ಬಗ್ಗೆ ಪ್ರಮಾಣ ಪತ್ರದ ಮೂಲಕ ತಿಳಿಸಿ’ ಎಂದು ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.