ಮೂಡುಬಿದಿರೆ: ಇಲ್ಲಿನ ಪುತ್ತಿಗೆಯ ವಿವೇಕಾನಂದ ನಗರದಲ್ಲಿ ಡಿ.10ರಿಂದ ಡಿ.15ರವರೆಗೆ 30ನೇ ವರ್ಷದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಸಂಭ್ರಮ ನಡೆಯಲಿದ್ದು, ಉತ್ಸವಕ್ಕೆ ಮೆರುಗು ತುಂಬಲು ವಿದ್ಯಾಗಿರಿ ಆವರಣದ ಸುಮಾರು 100 ಎಕರೆ ಪ್ರದೇಶವನ್ನು ಆಕರ್ಷವಾಗಿ ವಿನ್ಯಾಸಗೊಳಿಸಲಾಗಿದೆ.
ಪ್ಯಾಲೇಸ್ ಗ್ರೌಂಡ್‌ನಲ್ಲಿ ಕಂಗೊಳಿಸುತ್ತಿರುವ ಗೊಂಡೆ ಹೂವುಗಳು, ವಿವಿಧ ಜಾತಿಯ ಸಸ್ಯಗಳು ಮನಸ್ಸಿಗೆ ಮುದ ನೀಡುತ್ತಿದೆ. ಹೂವುಗಳಿಂದ ಮಾಡಿದ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ಕೃಷಿ ಸಿರಿ ಆವರಣದಲ್ಲಿ ಹಸಿರಿನ ಸೊಬಗು. 2ಲಕ್ಷಕ್ಕೂ ಹೆಚ್ಚು ಲಕ್ಷಕ್ಕೂ ಹೆಚ್ಚು ಹೂವುಗಳು ಅರಳಿ ನಿಂತಿವೆ. ಅಲ್ಲಲ್ಲಿ ಬೆದರು ಬೊಂಬೆಗಳನ್ನು ನಿಲ್ಲಿಸಲಾಗಿದೆ. ಎಲ್ಲ ಕೃಷಿಗಳನ್ನು ಸಾವಯವ ಗೊಬ್ಬರ ಬಳಸಿ ಮಾಡಲಾಗಿದೆ. ವಿರಾಸತ್ ಸಿದ್ಧತೆಗೆ ಸುಮಾರು ಒಂದು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಸರ್ವಜ್ಞ ಆವರಣ, ಜಗಜ್ಯೋತಿ ಬಸವೇಶ್ವರ ವೃತ್ತ ಪ್ರವೇಶಿಸಿದರೆ ವಿವಿಧ ದಾರ್ಶನಿಕರ, ಆದರ್ಶ ಪುರುಷರ ಕಲಾಕೃತಿಗಳು ಗಮನ ಸೆಳೆಯುತ್ತವೆ. ಶ್ರೀರಾಮ, ಶಾರದಾದೇವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಲಾಕೃತಿಗಳು ಕಾಣಸಿಗುತ್ತಿದೆ. ಶಿವಮೊಗ್ಗದ ಡೊಳ್ಳು ಕುಣಿತ ಕಲಾವಿದರ ಕಲಾಕೃತಿಗಳು ಕಟ್ಟಡವೊಂದರ ಪ್ರವೇಶ ದ್ವಾರದಲ್ಲಿ ಮೂಡಿಬಂದಿದೆ. ಹಂಪಿಯ ಕಲ್ಲಿನ ರಥ, ಉಗ್ರನರಸಿಂಹನ ಪ್ರತಿಕೃತಿ ಹೀಗೆ ಹಲವು ಕಲಾಕೃತಿಗಳು ಇಲ್ಲಿವೆ. ಆನೆ, ಹುಲಿ, ಚಿರತೆಗಳ ಕಲಾಕೃತಿಗಳು ಕಲಾವಿದರ ಕೈಯಲ್ಲಿ ಜೀವ ಪಡೆದಿವೆ. ಯಶೋಕಿರಣ ಕಟ್ಟಡದ ಆವರಣದೊಳಗೆ ಪ್ರವೇಶಿಸುವಾಗ ವೈವಿಧ್ಯಮಯ ಛಾಯಾಚಿತ್ರಗಳ ಪ್ರದರ್ಶನ ಗಮನ ಸೆಳೆಯುತ್ತದೆ. ಪರಿಸರ, ವನ್ಯ ಜೀವಿ, ಬುಡಕಟ್ಟು ಸಮುದಾಯಗಳನ್ನು ಪ್ರತಿಬಿಂಬಿಸುವ 600ಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನ ಇಲ್ಲಿದೆ.
‘ಆಳ್ವಾಸ್ ವಿರಾಸತ್‌ನ ಪ್ರತಿ ದಿನದ ಕಾರ್ಯಕ್ರಮ ಒಂದೊಂದು ವಿಶೇಷತೆಯನ್ನು ಹೊಂದಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.