ಮಂಗಳೂರು: ನಗರದ ಪುರಭವನ ಬಳಿಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ ಇನ್ನು ಮುಂದೆ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ನೇತೃತ್ವದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಸ್ತೆಯ ನಾಮಫಲಕವನ್ನು ಅನಾವರಣ ಮಾಡಲಾಯಿತು.
ನಾಮಕರಣದ ಅಂಗವಾಗಿ ಪೊಲೀಸ್ ಲೇನ್‌ನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ ಮೇಳೈಸಿತು. ರಸ್ತೆಗೆ ಬಾಳಪ್ಪ ಅವರ ಹೆಸರಿಡಲು ಅನುಮತಿ ದೊರಕಿಸಿಕೊಟ್ಟವರನ್ನು ಗೌರವಿಸಲಾಯಿತು. ಸನಾತನ ನಾಟ್ಯಾಲಯದ ಭರತನಾಟ್ಯ ಕಾರ್ಯಕ್ರಮ ಮುದ ನೀಡಿತು.
ರಸ್ತೆಯ ನಾಮಫಲಕ ಅನಾವರಣ ಮಾಡಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಅವರು ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಲು ಜನರನ್ನು ಒಗ್ಗೂಡಿಸಿದ ಸ್ವಾತಂತ್ರ್ಯ ಹೋರಾಟಗಾರ ಬಾಳಪ್ಪ ಅವರ ಹೆಸರಿನಲ್ಲಿ ನಗರದ ಪ್ರಮುಖ ರಸ್ತೆಯೊಂದು ಕಂಗೊಳಿಸುತ್ತಿರುವುದು ಸಂತೋಷದ ವಿಷಯ. ಮಂಗಳೂರಿಗೆ ಸಂಬಂಧಿಸಿ ಇದು ವಿಶೇಷ ದಿನ ಎಂದು ಅಭಿಪ್ರಾಯಪಟ್ಟರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಬಾಳಪ್ಪ ಅವರಂಥ ಹೋರಾಟಗಾರರ ಹೆಸರು ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಎಲ್ಲೂ ಕಾಣಿಸದೆ ಇರುವುದು ದುಃಖದ ವಿಷಯ. ನಗರದ ಹೃದಯ ಭಾಗದಲ್ಲಿ ಬಾಳಪ್ಪ ಅವರ ಹೆಸರು ಕಾಣಿಸುತ್ತಿರುವುದರಿಂದ ಮುಂದಿನ ತಲೆಮಾರಿಗೆ ಅವರ ಸಾಧನೆಯ ಬಗ್ಗೆ ತಿಳಿಯಲು ಅನುಕೂಲ ಆಗಲಿದೆ ಎಂದರು.
ಶೋಷಿತ, ದುರ್ಬಲ ಹಾಗೂ ಅವಕಾಶ ವಂಚಿತ ಗೇಣಿದಾರರ ಪರವಾಗಿ ಧ್ವನಿ ಎತ್ತಿದ ಧೀಮಂತ ನಾಯಕ ಬಾಳಪ್ಪ ಅವರ ಹೆಸರು ಇರಿಸಿರುವುದು ಬಂಟ್ವಾಳದ ಜನರಿಗೆ ಸಂದ ಗೌರವ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
ಜಿಲ್ಲಾ ಕುಲಾಲ ಕುಂಬಾರರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿದರು. ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ, ಮುಖಂಡರಾದ ಇನಾಯತ್ ಅಲಿ, ಕಸ್ತೂರಿ ಪಂಜ, ದಿವಾಕರ ಪಾಂಡೇಶ್ವರ, ರೂಪಾ ಡಿ.ಬಂಗೇರ, ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ ಕುಲಾಲ್, ಪೊಲೀಸ್ ಲೇನ್ ಶ್ರೀದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಕುಲಾಲ, ಉಪಾಧ್ಯಕ್ಷ ಜನಾರ್ದನ ಬೊಂಡಾಲ, ಶ್ರೀ ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಪಾಲ್ಗೊಂಡಿದ್ದರು. ನವೀನ್ ಪುತ್ತೂರು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.