
ಉಳ್ಳಾಲ: ಮುಂದಿನ 25 ವರ್ಷಗಳಲ್ಲಿ ಎಎಂಆರ್ (ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್) ಕಾರಣದಿಂದ ವಿಶ್ವದಾದ್ಯಂತ 40 ಮಿಲಿಯನ್ ಜನರು ಸಾವಿಗೀಡಾಗುವ ಸಾಧ್ಯತೆ ಇದೆ. ಇಂತಹ ಅಪಾಯಗಳನ್ನು ತಡೆಗಟ್ಟಲು ನಿರೋಧಕ ಕ್ರಮಗಳು ಮತ್ತು ವ್ಯವಸ್ಥಾಧಾರಿತ ಆರೋಗ್ಯ ಸೇವೆಗಳ ಬಲಪಡಿಸುವಿಕೆ ಅತ್ಯಗತ್ಯ ಎಂದು ಭಾರತೀಯ ಸಮುದಾಯ ಆರೋಗ್ಯ ಪ್ರತಿಷ್ಠಾನದ ರಾಯಭಾರಿ ಹಾಗೂ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ ಹೃದಯವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಕೆ ಶ್ರೀನಾಥ್ ರೆಡ್ಡಿ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಕೆ.ಎಸ್. ವೈದ್ಯಕೀಯ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಅಸಾಂಕ್ರಾಮಿಕ ರೋಗಗಳು ದೇಶದ ಎಲ್ಲ ಭಾಗಗಳಲ್ಲಿ ವೇಗವಾಗಿ ಹೆಚ್ಚುತ್ತಿವೆ. ಅಪೌಷ್ಠಿಕತೆ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಾಗಲೇ ಅತಿಯಾದ ತೂಕ ಎಲ್ಲ ವಯೋಮಾನದವರಲ್ಲಿಯೂ ಹೆಚ್ಚುತ್ತಿದೆ. ಜನಸಂಖ್ಯೆ, ಹವಾಮಾನ ಬದಲಾವಣೆ ಹಾಗೂ ಮಾಲಿನ್ಯವು ರೋಗ ಮತ್ತು ಸಾವಿನ ಮಾದರಿಗಳನ್ನು ಬದಲಾಯಿಸುತ್ತಿವೆ. ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (ಎಎಂಆರ್‌ನಿಂದ) ಈಗ ಜಗತ್ತಿನಲ್ಲಿ ಆತಂಕ ಉಂಟುಮಾಡಿದೆ. ಗಂಭೀರ ಸೋಂಕು ತಡೆಯಲು ವೈದ್ಯರು ಹೊಂದಿದ್ದ ಪ್ರಮುಖ ಆಯುಧ ಆ್ಯಂಟಿಬಯೋಟಿಕ್‌ಗಳು ಈಗ ಪರಿಣಾಮಕಾರಿಯಲ್ಲದ ಸ್ಥಿತಿಗೆ ಬರುತ್ತಿವೆ ಎಂದು ಅವರು ಹೇಳಿದರು.
ಎಎಂಆರ್‌ನಿಂದ ಪ್ರತಿ ವರ್ಷ ಜಗತ್ತಿನಲ್ಲಿ ಒಂದು ಮಿಲಿಯ ಜನರು ಸಾಯುತ್ತಿದ್ದಾರೆ. 25 ವರ್ಷಗಳಲ್ಲಿ ಈ ಸಂಖ್ಯೆ ಮೊದಲ ವಿಶ್ವಯುದ್ಧದಲ್ಲಿ ಸತ್ತವರಿಗಿಂತ ಎರಡು ಪಟ್ಟು ಹೆಚ್ಚುವ ಆತಂಕವಿದೆ ಎಂದ ಅವರು ಶಿಕ್ಷಣ ಕೇವಲ ಆಲೋಚನೆಗಳ ಉತ್ಪಾದನೆಯಲ್ಲ, ಅದನ್ನು ಸಮಾಜದ ಒಳಿತಿಗೆ ಅನುಕೂಲವಾಗುವ ಕ್ರಿಯಾಶೀಲ ಪರಿಹಾರಗಳಲ್ಲಿ ಪರಿವರ್ತಿಸಬೇಕು ಎಂದರು.
ಸಾಮಾಜಿಕ ಉದ್ದೇಶವಿಲ್ಲದ ವಿಜ್ಞಾನ ವ್ಯರ್ಥ. ಒನ್ ಹೆಲ್ತ್ ಪರಿಕಲ್ಪನೆ ಜಗತ್ತನ್ನು ಆರೋಗ್ಯಯುತವಾಗಿ ಇಡಲು ಸಹಕರಿಸುತ್ತದೆ. ಅದು ಪ್ರಾಣಿಗಳ ಆರೋಗ್ಯ, ಸಸ್ಯಗಳ ಆರೋಗ್ಯ, ಮಾನವ ಆರೋಗ್ಯ ಮತ್ತು ಭೂಮಿಯ ಆರೋಗ್ಯದ ಸಂಬಂಧವನ್ನು ಪರಿಗಣಿಸುತ್ತದೆ. ತಾಂತ್ರಿಕ ಪ್ರಗತಿ ಆರೋಗ್ಯ ಸೇವೆಯ ರೂಪವನ್ನು ಬದಲಾಯಿಸುತ್ತಿದೆ. ಆದರೆ ಸಾಮಾಜಿಕ, ಆರ್ಥಿಕ, ಪರಿಸರ ಹಾಗೂ ವಾಣಿಜ್ಯ ಅಂಶಗಳು ಜನರ ಆರೋಗ್ಯದ ಮೇಲೆ ಹೊಸ ರೀತಿಯ ಸವಾಲುಗಳನ್ನು ತರುತ್ತಿವೆ. ತಡವಾದ ರೋಗನಿರ್ಣಯ ಅಥವಾ ವಿಳಂಬವಾದ ರೆಫರಲ್‌ಗಳಿಂದ ರೋಗಿಗಳಿಗೆ ಚಿಕಿತ್ಸೆ ಸಿಗದಿದ್ದರೆ ಅದು ವ್ಯವಸ್ಥೆಯ ವೈಫಲ್ಯ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಲಾಧಿಪತಿ ವಿಶಾಲ್ ಹೆಗ್ಡೆ, ಕುಲಸಚಿವ ಪ್ರೊ.ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೊ. ಪ್ರಸಾದ್ ಬಿ.ಶೆಟ್ಟಿ ಭಾಗವಹಿಸಿದ್ದರು. ಮಧುಕರ ಶಾಂತಾರಾಮ ಕೇಕ್ರೆ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು. ಕೇಕ್ರೆ ಅವರ ಮಕ್ಕಳು ಪದವಿ ಸ್ವೀಕರಿಸಿದರು. 1,355 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.