ಮಂಗಳೂರು: ಕುಡುಪುವಿನಲ್ಲಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಗುಂಪು ಹಲ್ಲೆ ನಡೆಸಿ ಕೇರಳದ ಪುಲ್ಪಳ್ಳಿಯ ಅಶ್ರಫ್ ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಕೇರಳದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಶ್ರಫ್ ಮಾನಸಿಕ ಅಸ್ವಸ್ಥರಾಗಿದ್ದರೆಂದೂ 9ನೇ ತರಗತಿಯಲ್ಲಿರುವಾಗ ಅವರಿಗೆ ಚಿಕಿತ್ಸೆ ಆರಂಭಿಸಲಾಗಿತ್ತು ಎಂದೂ ಕುಟುಂಬದವರು ತಿಳಿಸಿದ್ದರು. ಇದನ್ನು ಖಾತರಿಪಡಿಸಲು ನಗರ ಪೊಲೀಸರ ತಂಡ ಇಡುಕ್ಕಿ ಜಿಲ್ಲೆಯ ತೊಡುಪುಳದ ಪೈಂಗುಳಂ ಎಂಬಲ್ಲಿನ ಮನೋರೋಗ ಚಿಕಿತ್ಸೆಯ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಮಲಪ್ಪುರಂ ಜಿಲ್ಲೆಯ ವೆಟ್ಟಂ ಎಂಬಲ್ಲಿನ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಅಶ್ರಫ್ ಅವರಿಗೆ ಆರಂಭಿಕ ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದ್ದು ಅಲ್ಲಿಗೂ ಪೊಲೀಸರ ತಂಡ ತೆರಳಿದೆ.
ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಮಂಗಳೂರಿನಲ್ಲಿ ಗುಜರಿ ಸಂಗ್ರಹ ಮಾಡಿ ಮಾರಾಟ ಮಾಡುತ್ತಿದ್ದ ಎಂದು ಅವರ ಕುಟುಂಬದವರು ಹೇಳಿದ್ದರು. ಗುಜರಿ ಸಾಮಗ್ರಿಗಳನ್ನು ಖರೀದಿ ಮಾಡುವ ಅಂಗಡಿಗಳ ಎದುರಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
ಅಂಗಡಿಯೊಂದಕ್ಕೆ ಅಶ್ರಫ್ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗುವ ದೃಶ್ಯವನ್ನು ಪೊಲೀಸರು ಸಂಗ್ರಹಿಸಿದ್ದು ದೃಶ್ಯದಲ್ಲಿ ಇರುವವರು ಅಶ್ರಫ್ ಎಂದು ಮೇ 4 ಮತ್ತು 5ರಂದು ಮಂಗಳೂರಿನಲ್ಲಿದ್ದ ಸಹೋದರ ಅಬ್ದುಲ್ ಜಬ್ಬಾರ್ ಖಚಿತಪಡಿಸಿದ್ದಾರೆ ಎನ್ನಲಾಗಿದೆ.
ಸಾಮಗ್ರಿಗಳನ್ನು ತೆಗೆದುಕೊಂಡು ಬಂದು ಅಂಗಡಿಯ ಒಳಗೆ ಸುರಿಯುವ ಅಶ್ರಫ್ ನಂತರ ಗೋಣಿಚೀಲಗಳನ್ನು ಎತ್ತಿಕೊಂಡು ಅತ್ತಿತ್ತ ಹೋಗುವ ದೃಶ್ಯಗಳು ಲಭ್ಯವಾಗಿವೆ.
ಬಂಧಿತರಿಂದ ಒಟ್ಟು 18 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ಅದರಿಂದ ಮಾಹಿತಿ ಡಿಕೋಡ್ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಕ್ಷಿಗಳೆಂದು ಹೇಳಲಾದ ಐವರು ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದೂ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.