ADVERTISEMENT

ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವ 20ರಿಂದ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:16 IST
Last Updated 16 ಏಪ್ರಿಲ್ 2025, 13:16 IST

ಬೆಳ್ತಂಗಡಿ: ಇಲ್ಲಿನ ಸೋಮಾವತಿ ನದಿಯ ತಟದಲ್ಲಿರುವ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಕೇಂದ್ರ ಲಾಯಿಲ ರಾಘವೇಂದ್ರ ಮಠದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಎ.20ರಿಂದ 23ರವರೆಗೆ ರಾಮಚಂದ್ರ ಮುಖ್ಯಪ್ರಾಣ ಸಹಿತ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ’ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು

ಬುಧವಾರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಧಾರ್ಮಿಕ ಕ್ಷೇತ್ರದ ಬೆಳವಣಿಗೆಯಲ್ಲಿ ದಿ.ರವಿರಾಜ ಹೆಗ್ಡೆ, ದಿ. ಡಾ. ಉಮಾನಾಥ ಪ್ರಭು, ದಿ. ಕೆ. ವಸಂತ ಬಂಗೇರರ ಕೊಡುಗೆ, ಪೀತಾಂಬರ ಹೇರಾಜೆಯವರ ಮಾರ್ಗದರ್ಶನ, ಗುರುಗಳ ಭಕ್ತ ಸಮುದಾಯದ ಸಹಕಾರ ಸ್ಮರಣೀಯವಾದುದು. ಈಗಾಗಲೇ ಎರಡು ಬಾರಿ ಬ್ರಹ್ಮಕಲಶೋತ್ಸವ ನಡೆದಿದ್ದು, ಇದೀಗ ಮೂರನೇ ಬಾರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕಾರ್ಕಳ ಭಾರತಿ ರಮಣ ಆಚಾರ್ಯರ ಮಾರ್ಗದರ್ಶನದಲ್ಲಿ, ಕ್ಷೇತ್ರದ ಅರ್ಚಕ ವೇದಮೂರ್ತಿ ರಾಘವೇಂದ್ರ ಭಾಂಗಿಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ’ ಎಂದರು.

ಎ. 20ರಂದು ಸಂಜೆ ವೈದಿಕ ವಿಧಿಗಳು ಪ್ರಾರಂಭಗೊಳ್ಳಲಿದೆ. ಭಜನಾ ಕಾರ್ಯಕ್ರಮದ ಬಳಿಕ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸುಜಿತಾ ವಿ. ಬಂಗೇರ ವಹಿಸುವರು. ಎ. 21ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಮಾತನಾಡುವರು. ಮೈಸೂರು ರಾಮಚಂದ್ರರಾವ್ ಅವರಿಂದ ದಾಸರ ಹಾಡುಗಳ ಗಾಯನ ನಡೆಯಲಿದೆ.

ADVERTISEMENT

ಎ. 22ರಂದು ಸಂಜೆ ಭಜನೆ ನಡೆಯಲಿದೆ. ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡುವರು. ಸಚಿವ ಮಾಂಕಾಳ ಎಸ್. ವೈದ್ಯ, ನಟ ವಿಜಯ ರಾಘವೇಂದ್ರ, ಧಾರ್ಮಿಕ ಮುಖಂಡರು ಭಾಗವಹಿಸುವರು. ಶ್ರೀದೇವಿ ಸಚಿನ್ ಮುಂಡ್ರುಪ್ಪಾಡಿ ಅವರ ನಿನಾದ ಕ್ಲಾಸಿಕಲ್ಸ್ ವತಿಯಿಂದ ಭಕ್ತಿ ಗೀತಾ ಕಾರ್ಯಕ್ರಮ ನಡೆಯಲಿದೆ.

ಎ. 23ರಂದು ಬೆಳಿಗ್ಗೆ ರಾಘವೇಂದ್ರ ಗುರುಗಳ ಬೃಂದಾವನದಲ್ಲಿ ರಾಯರ ಮೃತ್ತಿಕಾ ಪ್ರತಿಷ್ಠಾಪನೆ ಸಂಪನ್ನಗೊಳ್ಳಲಿದೆ. 11.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡುವರು’ ಎಂದರು. 

ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯದರ್ಶಿ ವಸಂತ ಸುವರ್ಣ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಟ್ರಸ್ಟಿ ಪ್ರೊ. ಕೃಷ್ಣಪ್ಪ ಪೂಜಾರಿ, ಸೋಮೇಗೌಡ, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಗೌಡ ಶಿರ್ಲಾಲು, ಆರ್ಥಿಕ ಸಮಿತಿಯ ಸಂಚಾಲಕ ಸಂತೋಷ್ ಕುಮಾರ್ ಲಾಯಿಲ, ಹೊರೆ ಕಾಣಿಕೆಯ ಸಂಚಾಲಕ ಪ್ರವೀಣ್ ಫೆರ್ನಾಂಡಿಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.