ADVERTISEMENT

ಕಡಬ | ಪೆಟ್ರೋಲ್ ಎರಚಿ ಕೊಲೆ ಯತ್ನ: ಗಾಯಾಳು ಅಣ್ಣ ಸಾವು

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 4:00 IST
Last Updated 11 ಜೂನ್ 2025, 4:00 IST
<div class="paragraphs"><p>ಸಾವು&nbsp;(ಪ್ರಾತಿನಿಧಿಕ ಚಿತ್ರ)</p></div>

ಸಾವು (ಪ್ರಾತಿನಿಧಿಕ ಚಿತ್ರ)

   

ಕಡಬ(ಉಪ್ಪಿನಂಗಡಿ): ಕಡಬ ತಾಲ್ಲೂಕು ಕೋಡಿಂಬಾಳ ಸಮೀಪದ ಕೋರಿಯರ್ ರೈಲ್ವೇ ಹಳಿ ಸಮೀಪ ಜೂನ್‌ 8ರಂದು ಅಣ್ಣನ ಮೇಲೆ ತಮ್ಮ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆಯಲ್ಲಿ ಗಂಭೀರ ಸ್ವರೂಪದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅಣ್ಣ ಹನುಮಪ್ಪ ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ.

ಆತನ ತಮ್ಮ ನಿಂಗಪ್ಪನ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಹನುಮಪ್ಪನ ಮೇಲೆ ನಿಂಗಪ್ಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಗಾಯಾಳು ಹನುಮಪ್ಪ ಹಳಿ ಪಕ್ಕದಲ್ಲಿದ್ದ ನೀರಿದ್ದ ಚರಂಡಿಗೆ ಬಿದ್ದು ಹೊರಳಾಡಿ, ಬೊಬ್ಬೆ ಹೊಡೆದಿದ್ದು, ಸ್ಥಳಿಯರು ಬಂದು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿ ನಿಂಗಪ್ಪನನ್ನು ವಶಕ್ಕೆ ಪಡೆದಿದ್ದ ಕಡಬ ಪೊಲೀಸರು ಬಳಿಕ ಮಂಗಳೂರು ವಿಭಾಗದ ರೈಲ್ವೇ ಪೊಲೀಸರ ವಶಕ್ಕೆ ನೀಡಿದ್ದರು.

‘ಅಣ್ಣನಿಗೆ ವಿಪರೀತ ಕುಡಿತದ ಚಟವಿತ್ತು. ಆತನ ಕಾಟದಿಂದಲೇ 14 ವರ್ಷಗಳ ಹಿಂದೆ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ನಮ್ಮ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಯತ್ನಿಸಿದ್ದ. ಜೂನ್‌ 8ರಂದು ನನ್ನ ಜೊತೆಯೂ ಗಲಾಟೆ ಮಾಡಿದ್ದಾನೆ. ಈ ಎಲ್ಲಾ ಹಿಂಸೆಯಿಂದ ನಾವು ರೋಸಿ ಹೋಗಿ ಅವನನ್ನು ಕೊಲೆ ಮಾಡಲು ನಿರ್ಧರಿಸಿದ್ದೆವು’ ಎಂದು ನಿಂಗಪ್ಪ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.