ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಕ್ಕೆ 50 ವರ್ಷ ತುಂಬಿದ ಪ್ರಯುಕ್ತ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ರಾಧಾ ಮೋಹನದಾಸ್ ಅಗರ್ವಾಲ್ ಅವರು ಸಸಿ ನೆಟ್ಟರು.
ಮಂಗಳೂರು: ‘ಜಾಗೃತ ಹಾಗೂ ಸಂಘಟಿತ ಜನತೆಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ನಾಗರಿಕರು ಎಚ್ಚರವಾಗಿರದಿದ್ದರೆ, ದೇಶದಲ್ಲಿ ಅಳುಕಿನ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿದರು.
ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಇಲ್ಲಿ ಬುಧವಾರ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್– ಕರಾಳ ಇತಿಹಾಸಕ್ಕೆ 50 ವರ್ಷಗಳು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಭುತ್ವವನ್ನು ಪ್ರಶ್ನಿಸುವುದನ್ನು ನಿಲ್ಲಿಸಿದರೆ ದೇಶವೂ ಮತ್ತೆ ಪರಕೀಯತೆಯತ್ತ ಹೆಜ್ಜೆ ಹಾಕುತ್ತದೆ. ತುರ್ತು ಪರಿಸ್ಥಿತಿಯ ಕರಾಳತೆಯನ್ನು ಮೆಲುಕು ಹಾಕುವ ಈ ದಿನ ನಾವೂ ಈ ಮಾತುಗಳನ್ನು ಮತ್ತೆ ಜ್ಞಾಪಿಸಿಕೊಳ್ಳಬೇಕು. ಅಂತಹ ಕರಾಳ ದಿನಗಳು ಮತ್ತೊಮ್ಮೆ ಮರುಕಳಿಸಲು ಅವಕಾಶ ನೀಡಬಾರದು’ ಎಂದರು.
‘ತುರ್ತು ಪರಿಸ್ಥಿತಿಯ ವಿರುದ್ಧದ ಆಂದೋಲನ ರೂಪುಗೊಂಡಿದ್ದೇ ಕರ್ನಾಟಕದ ನೆಲದಲ್ಲಿ. ರೈಲ್ವೆ ಕಾರ್ಮಿಕರ ನೇತಾರರಾಗಿದ್ದ ಈ ಮಣ್ಣಿನ ಮಗ ಜಾರ್ಜ್ ಫರ್ನಾಂಡಿಸ್ ಅದಕ್ಕೆ ಮುಂದಾಳತ್ವ ನೀಡಿದ್ದರು’ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಬಿಜೆಪಿ ಹುಟ್ಟಿರುವುದೇ ದೇಶದ ಸಂವಿಧಾನವನ್ನು ಉಳಿಸುವುದಕ್ಕೆ. ಭಾರತವು ಜಗತ್ತಿನಾದ್ಯಂತ ಮಾನ್ಯತೆ ಪಡೆದಿದ್ದರೆ ಪ್ರಜಾಪ್ರಭುತ್ವದ ಮೌಲ್ಯಗಳಿಂದಾಗಿ. ಕಾಂಗ್ರೆಸ್‌ನ ಮಾನಸಿಕತೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧ. ಅದು ಈಗಲೂ ಬದಲಾಗಿಲ್ಲ. ಇಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಹೋರಾಟಗಾರರ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸುತ್ತಿದೆ’ ಎಂದರು.
ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗಿರಥಿ ಮುರುಳ್ಯ, , ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಕಾರ್ಯಕ್ರಮ ಸಂಘಟನಾ ಸಮಿತಿಯ ಸಹಸಂಚಾಲಕ ಗಣೇಶ್ ಅರ್ಬಿ, ಬಿಜೆಪಿ ದ.ಕ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವರ್ ಭಾಗವಹಿಸಿದ್ದರು.
ಬಿಜೆಪಿ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಸಂಘಟನಾ ಸಮಿತಿ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ ಧನ್ಯವಾದ ಸಮರ್ಪಿಸಿದರು.
‘ಬಾಲ ಅಲ್ಲಾಡಿಸುವ ಡ್ಯಾಷ್ ಡ್ಯಾಷ್..’
‘ಬಿಜೆಪಿಯ ಒಂದು ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಾಗ ಹೇಳುತ್ತಾರೆ. ಸ್ವಾತಂತ್ರ್ಯ ಬಂದಾಗ ನಮ್ಮ ಪಕ್ಷವೇ ಹುಟ್ಟಿರಲಿಲ್ಲ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆಯೇ ದೌರ್ಜನ್ಯ ನಡೆದಾಗ ಖರ್ಗೆ ಎನು ಮಾಡುತ್ತಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.
‘ನಾವು ದೇಶದ ನಿಯತ್ತಿರುವ ನಾಯಿಗಳು. ಆದರೆ ಕಾಂಗ್ರೆಸ್‌ನವರ ನಿಯತ್ತು ಇಂದಿರಾ ಮೇಲೆ. ಅವರೆಲ್ಲ ಇಂದಿರಾ ಎದುರು ಬಾಲ ಅಲ್ಲಾಡಿಸುವ ಡ್ಯಾಶ್ ಡ್ಯಾಶ್ ಆಗಿದ್ದರು. ಇಂದಿರಾ ಎಸೆಯುವ ಬಿಸ್ಕೆಟ್‌ಗೆ ಕುಂಯ್ ಕುಂಯ್ ಎನ್ನುತ್ತಿದ್ದರು. ಇಂದಿರಾ ಇದ್ದರೆ ಇಂಡಿಯಾ ಎಂದು ಘೋಷಣೆ ಕೂಗುವ ಪಟಾಲಂ ಕಾಂಗ್ರೆಸ್‌ನಲ್ಲಿತ್ತು. ಈಗ ಇಂದಿರಾ ಇಲ್ಲ; ಆದರೆ ಇಂಡಿಯಾ ಇಲ್ಲವೇ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.