ADVERTISEMENT

ಜನಪ್ರತಿನಿಧಿಗಳಿಗೇ ಅರಿವಿಲ್ಲದ ಶಿಕ್ಷಣ ನೀತಿ

ಎನ್‍ಎಸ್‍ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಟೀಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 11:23 IST
Last Updated 18 ನವೆಂಬರ್ 2021, 11:23 IST
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಗುರುವಾರ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಜಾಗೃತಿ ಮೂಡಿಸುವ ಕರಪತ್ರವನ್ನು ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್‌ ಬಿಡುಗಡೆಗೊಳಿಸಿದರು. ಪವನ್‌ ಸಾಲಿಯಾನ್‌, ರಫೀಕ್‌ ಅಲಿ, ಸವಾದ್‌ ಸುಳ್ಯ, ಭರತ್‌ ರಾಮ್‌ ಗೌಡ, ಸುಹಾನ್‌ ಆಳ್ವ ಇದ್ದರು.
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಗುರುವಾರ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಜಾಗೃತಿ ಮೂಡಿಸುವ ಕರಪತ್ರವನ್ನು ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್‌ ಬಿಡುಗಡೆಗೊಳಿಸಿದರು. ಪವನ್‌ ಸಾಲಿಯಾನ್‌, ರಫೀಕ್‌ ಅಲಿ, ಸವಾದ್‌ ಸುಳ್ಯ, ಭರತ್‌ ರಾಮ್‌ ಗೌಡ, ಸುಹಾನ್‌ ಆಳ್ವ ಇದ್ದರು.   

ಮಂಗಳೂರು: ‘ರಾಜ್ಯದ ಸಂಸದರು, ಶಾಸಕರಿಗೇ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಜ್ಞಾನವಿಲ್ಲದೆ, ಇದನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ಅತ್ಯಂತ ಅಪಾಯಕಾರಿ’ ಎಂದು ಎನ್‍ಎಸ್‍ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ಶಿಕ್ಷಣ ನೀತಿ ಅನುಷ್ಠಾನದಿಂದ ಆಗುವ ಅಪಾಯಗಳ ಕುರಿತು ಸಮಾಜ ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಎನ್‌ಎಸ್‌ಯುಐ ಹೋರಾಟ ನಡೆಸುತ್ತಿದೆ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಹೊಸ ಶಿಕ್ಷಣ ನೀತಿ ಬಗ್ಗೆ ಶಾಲೆ– ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳಿಗೆ ಅರಿವಿಲ್ಲ. ಇದು ಶಿಕ್ಷಣ ವ್ಯವಸ್ಥೆಯನ್ನೇ ಹಿಂದಕ್ಕೆ ತಳ್ಳುವ ನೀತಿಯಾಗಿದ್ದು, ದೇಶದ ಶೇ. 30ರಷ್ಟಿರುವ ವಿದ್ಯಾರ್ಥಿ ಸಮುದಾಯದವನ್ನು ಗುರಿಯಾಗಿಸಿ ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ನೀಡುವ ಕುತಂತ್ರ ಎಂದು ದೂರಿದರು.

ADVERTISEMENT

ಎನ್‍ಇಪಿ ವಿರೋಧಿ ಹೋರಾಟದ ಪ್ರಮುಖ ರಫೀಕ್ ಅಲಿ ಮಾತನಾಡಿ, ‘ಇದು ಯಾವುದೇ ರೀತಿಯ ರಾಜಕೀಯ ಪ್ರೇರಿತ ವಿರೋಧವಲ್ಲ. ಈ ನೀತಿಯನ್ನು ತಜ್ಞರ ಸಲಹೆ ಪಡೆದು, ತಪ್ಪುಗಳನ್ನು ಸರಿಪಡಿಸಿ ಜಾರಿಗೊಳಿಸಬೇಕು ಎಂಬುದು ನಮ್ಮ ಆಗ್ರಹ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಗುರುವಾರದಿಂದ 10 ದಿನಗಳ ಕಾಲ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚುವ ಜತೆಗೆ 2 ಲಕ್ಷ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಳಿಕ ಅದನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ಎನ್‍ಎಸ್‍ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸವದ್ ಸುಳ್ಯ ಹೇಳಿದರು.

ವಿದ್ಯಾರ್ಥಿಗಳ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಎನ್‍ಎಸ್‍ಯುಐ ಪ್ರಮುಖರಾದ ಭರತ್ ರಾಮ್ ಗೌಡ, ಸುಹಾನ್ ಆಳ್ವ, ನವೀದ್, ಝಾಕಿರ್, ವಿನಯ್, ಝೈನ್ ಆತೂರು, ಪವನ್ ಸಾಲಿಯಾನ್, ಅಂಕುಶ್ ಶೆಟ್ಟಿ, ಬಾತಿಶ್ ಅಳಕೆಮಜಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.