ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶನಿವಾರ ಗಾಳಿ ಸಹಿತ ಭಾರಿ ಮಳೆಯಾಗಿದೆ.
ತಾಲ್ಲೂಕಿನ ನೇತ್ರಾವತಿ, ಫಲ್ಗುಣಿ, ಮೃತ್ಯುಂಜಯ, ಸೋಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಮಳೆಯಿಂದಾಗಿ ಬಹುತೇಕ ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ.
ಲಾಯಿಲ ಗ್ರಾಮದ ಕೇಳ್ತಾಜೆ ಬಳಿ ರಸ್ತೆಗೆ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಎರಡು ದಿನಗಳಿಂದ ವಿದ್ಯುತ್ ವ್ಯತ್ಯಯ ಆಗಿದೆ. ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಂಡಾಜೆ, ಇಂದಬೆಟ್ಟು, ಕಡಿರುದ್ಯಾವರ, ನಡ ಸುತ್ತಮುತ್ತ ಭಾರಿ ಗಾಳಿ ಮಳೆಯಾಗಿದ್ದು ಅಡಿಕೆ ಮರಗಳು ಧರೆಗುರುಳಿವೆ.
ಶುಕ್ರವಾರ ರಾತ್ರಿ ಸುರಿದ ಮಳೆಗೆ ಲಾಯಿಲ-ಕಿಲ್ಲೂರು ಸಾಗುವ ಗಾಂಧಿನಗರ ಸಮೀಪ ಮರ ಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಕುವೆಟ್ಟು ಗ್ರಾಮದ ವರಕಬೆ ಬಳಿ ರಸ್ತೆಗೆ ಮರ ಉರುಳಿ ಸುಮಾರು ಒಂದು ತಾಸು ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು.
ತೋಟತ್ತಾಡಿಯಲ್ಲಿ ಮರ ಉರುಳಿ 8 ವಿದ್ಯುತ್ ಕಂಬ ಮುರಿದು ಬಿದ್ದಿವೆ. ನಡ ವ್ಯಾಪ್ತಿಯಲ್ಲೂ ಕಿಲ್ಲೂರು ಎಲ್.ಟಿ. ಲೈನ್‌ಗೆ ಸಂಬಂಧಿಸಿ 10ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಮುಂಡಾಜೆ-ಧರ್ಮಸ್ಥಳ ರಸ್ತೆಯ ಪಿಲತ್ತಡ್ಕ ಬಳಿ ರಸ್ತೆಗೆ ಮರ ಬಿದ್ದು ಅರ್ಧ ತಾಸು ಸಂಚಾರಕ್ಕೆ ಸಮಸ್ಯೆಯಾಯಿತು. ಸ್ಥಳೀಯರು ಮರ ತೆರವುಗೊಳಿಸಿದರು. ಬೆಳ್ತಂಗಡಿಯಲ್ಲಿ ದ್ವಿಚಕ್ರ ವಾಹನದ ಷೋರೂಂಗೆ ಮರ ಬಿದ್ದು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಮಚ್ಚಿನ ಗ್ರಾಮದ ಲೀಲಾ ಶಿವಪ್ಪಗೌಡ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಗುರಿಪಳ್ಳದ ಲೋಕೇಶ್ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮಚ್ಚಿನ ಗ್ರಾಮದ ಅಶೋಕ ನಾವಡರ ಮನೆಗೆ ಮರ ಬಿದ್ದಿದೆ. ಬೆಳ್ತಂಗಡಿಯ ಸಂಜಯನಗರದ ಮಹಮ್ಮದ್ ರಫಿ ಎಂಬುವರ ಮನೆಯ ಗೋಡೆ ಕುಸಿದಿದೆ.
ನಡ ಮಂಜೊಟ್ಟಿ ಫೈಸೆನ್ಸ್‌ನ ಮುನ್ನ ಯಾನೆ ಲತೀಫ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿ ನಿಲ್ಲಿಸಿದ್ದ ಬೈಕ್‌ಗೂ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.