ADVERTISEMENT

ಬೆಳ್ತಂಗಡಿ: ಆಸ್ತಿ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ

34 ಗ್ರಾಮ ಪಂಚಾಯಿತಿಗಳಲ್ಲಿ ಶೇ 100 ತೆರಿಗೆ ಸಂಗ್ರಹ: ತಾಲ್ಲೂಕು ಪಂಚಾಯಿತಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 18 ಮೇ 2025, 13:00 IST
Last Updated 18 ಮೇ 2025, 13:00 IST
ಶೇ 100 ಗುರಿ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು
ಶೇ 100 ಗುರಿ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು   

ಬೆಳ್ತಂಗಡಿ: ಕಳೆದ ಆರ್ಥಿಕ ವರ್ಷ (2024-25)ದಲ್ಲಿ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಬೆಳ್ತಂಗಡಿ ತಾಲ್ಲೂಕಿನ 48 ಗ್ರಾಮ ಪಂಚಾಯಿತಿಗಳ ಪೈಕಿ 34 ಗ್ರಾಮ ಪಂಚಾಯಿತಿಗಳು ಮೊದಲ ಬಾರಿಗೆ ಶೇ 100 ಗುರಿ ಸಾಧಿಸಿವೆ. ಎರಡು ಗ್ರಾಮ ಪಂಚಾಯಿತಿಗಳು ಹಿಂದಿನ ಬಾಕಿಯೂ ಸೇರಿದಂತೆ ತೆರಿಗೆಯನ್ನು ಸಂಪೂರ್ಣವಾಗಿ ವಸೂಲಿ ಮಾಡಿಕೊಂಡಿವೆ.

2024-25ರ ಆರ್ಥಿಕ ವರ್ಷ, ಹಳೆಯ ಬಾಕಿ ಸೇರಿ 48 ಗ್ರಾಮ ಪಂಚಾಯಿತಿಗಳಿಗೆ ₹ 9.24 ಕೋಟಿ ವಸೂಲಾತಿ ಗುರಿ ಹೊಂದಿತ್ತು. ಈ ಪೈಕಿ ₹ 7.83 ಕೋಟಿ ವಸೂಲು ಮಾಡಲಾಗಿದ್ದು, ಶೇ 78.77ರಷ್ಟು ಗುರಿ ಸಾಧನೆ ಮಾಡಿದೆ. ಹಳೆಯ ಬಾಕಿ ಹೊರತು ಪಡಿಸಿ 2024-25ರ ಒಟ್ಟು ₹ 7.63 ಕೋಟಿ ತೆರಿಗೆಯನ್ನು ಪೂರ್ಣಪ್ರಮಾಣದಲ್ಲಿ ಪಾವತಿಸಿಕೊಂಡು ಸಾಧನೆ ಮಾಡಿದೆ. ಅಭಿವೃದ್ಧಿಗೆ ಬೇಕಾಗುವ, ವೇತನ ಸಹಿತ ಎಲ್ಲ ಬೇಡಿಕೆಯನ್ನು ಪೂರೈಸಲು ಎಲ್ಲ ಗ್ರಾಮ ಪಂಚಾಯಿತಿಗಳು ಶ್ರಮಿಸಿವೆ.

ಗುರಿ ಸಾಧಿಸಿದ ಗ್ರಾ.ಪಂ.ಗಳು: ನರೇಗಾ ಯೋಜನೆಯಡಿ ಕಳಿಯ, ಮರೋಡಿ, ಕೊಯ್ಯೂರು, ಕಲ್ಮಂಜ, ಅರಸಿನಮಕ್ಕಿ ಗ್ರಾಮ ಪಂಚಾಯಿತಿಗಳು ಶೇ 100 ಗುರಿ ಸಾಧಿಸಿದ್ದು, 2024-25ರ ಸಾಲಿನ ತೆರಿಗೆಗಳ ಬೇಡಿಕೆಯಲ್ಲಿ ಅಳದಂಗಡಿ, ಅಂಡಿಂಜೆ, ಆರಂಬೋಡಿ, ಬಳಂಜ, ಬಂದಾರು, ಬೆಳಾಲು, ಬಾರ್ಯ, ಚಾರ್ಮಾಡಿ, ಇಳಂತಿಲ, ಇಂದಬೆಟ್ಟು, ಕಳಿಯ, ಕಲ್ಮಂಜ, ಕುಕ್ಕೇಡಿ, ಕಾಶಿಪಟ್ನ, ಮಚ್ಚಿನ, ಮಡಂತ್ಯಾರು, ಮುಂಡಾಜೆ ಮಾಲಾಡಿ, ಮಲವಂತಿಗೆ, ಮರೋಡಿ, ಮೇಲಂತಬೆಟ್ಟು, ಮಿತ್ತಬಾಗಿಲು, ನಡ, ನಾರಾವಿ, ನೆರಿಯ, ನಿಡ್ಲೆ, ಪಡಂಗಡಿ, ಪಟ್ರಮೆ, ಶಿರ್ಲಾಲು, ತಣ್ಣೀರುಪಂತ, ತೆಕ್ಕಾರು, ಉಜಿರೆ, ವೇಣೂರು ಗ್ರಾಮ ಪಂಚಾಯಿತಿಗಳು ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸಿಕೊಂಡಿವೆ.

ADVERTISEMENT

ತಾ.ಪಂ.ನಿಂದ ಪ್ರಶಂಸಾ ಪತ್ರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕದ್‌ ಖರ್ಗೆ ಅವರ ಸೂಚನೆಯಂತೆ ಮಾರ್ಚ್‌ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಅವರು ನಿಗದಿತ ಗುರಿ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳನ್ನು ಗೌರವಿಸುವಂತೆ ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಿದ್ದರು. ಅದರಂತೆ ನೂರರಷ್ಟು ಗುರಿ ಸಾಧನೆಗೆ ಕಾರಣರಾದ ಬೆಳ್ತಂಗಡಿ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿ ಸಹಿತ ಸಿಬ್ಬಂದಿಯನ್ನುತಾಲ್ಲೂಕು ಪಂಚಾಯಿತು ಇಒ ಭವಾನಿ ಶಂಕರ್ ಅವರು ಪ್ರಶಂಸಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದ್ದಾರೆ.

ನಾವೂರು, ಸುಲ್ಕೇರಿಗೆ ವಿಶೇಷ ಗೌರವ: ಪ್ರಸಕ್ತ ಸಾಲಿನ ಆಸ್ತಿಗೆ ತೆರಿಗೆ ವಸೂಲಾತಿಯೇ ಸವಾಲಾಗಿದ್ದರಿಂದ ನಾವೂರು ಹಾಗೂ ಸುಲ್ಕೇರಿ ಗ್ರಾಮ ಪಂಚಾಯಿತಿಗಳು 2024-25 ಆರ್ಥಿಕ ವರ್ಷ ಮತ್ತು ಅದಕ್ಕಿಂತ ಹಿಂದಿನ ಸಾಲಿನ ಬಾಕಿಯನ್ನೂ ವಸೂಲಿ ಮಾಡಿವೆ. ಜತೆಗೆ ಕಳೆದ ವರ್ಷ ನರೇಗಾ ಯೋಜನೆಯಲ್ಲಿ ಬಂದಾರು ಗ್ರಾಮ ಪಂಚಾಯಿತಿ 17,555 ಮಾನವ ದಿನಗಳನ್ನು ಸೃಜಿಸಿದ್ದು, ಚಾರ್ಮಾಡಿ ಗ್ರಾಮ ಪಂಚಾಯಿತಿ 15,591 ಮಾನವ ದಿನಗಳನ್ನು ಸೃಜಿಸಿ ವೈಯಕ್ತಿಕ ಸಾಧನೆ ಮಾಡಿದೆ.

2025-26ನೇ ಸಾಲಿನಲ್ಲೂ ಮುಂಚೂಣಿ: 2025-26ನೇ ಸಾಲಿನಲ್ಲಿ 48 ಗ್ರಾಮ ಪಂಚಾಯಿತಿಗಳಿಗೆ ₹ 9.73 ಕೋಟಿ ವಸೂಲಾತಿ ಗುರಿ ನಿಗದಿ ಮಾಡಲಾಗಿದೆ. ಏಎಪ್ರಿಲ್, ಮೇ, ಜೂನ್‌ ಒಳಗಾಗಿ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ 5 ರಿಯಾಯಿತಿ ನೀಡಲಾಗಿದೆ. ಈಗಾಗಲೆ ಶೇ 7ರಷ್ಟು (₹65 ಲಕ್ಷ) ತೆರಿಗೆ ಸಂಗ್ರಹವಾಗಿದೆ. ಇದರಿಂದ ತೆರಿಗೆದಾರರಿಗೆ ಈಗಾಗಲೆ ₹ 2.25 ಲಕ್ಷ ರಿಯಾಯಿತಿ ದೊರೆತಂತಾಗಿದೆ. ಜೂನ್ 30ರೊಳಗೆ ಶೇ 20ರಷ್ಟು ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಪ್ರಶಾಂತ್ ತಿಳಿಸಿದ್ದಾರೆ.

2024-25ರಲ್ಲಿ ಗುರಿ ಮೀರಿದ ಸಾಧನೆ: ಆಸ್ತಿ ತೆರಿಗೆ ಕಟ್ಟಡ ಮತ್ತು ಭೂಮಿ ತೆರಿಗೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ನಿರ್ದೇಶನದಂತೆ ಕಳೆದ ಬಾರಿ ನಮ್ಮಲ್ಲಿ 35 ಗ್ರಾಮ ಪಂಚಾಯಿತಿಗಳು ಶೇ 100 ರಷ್ಟು ತೆರಿಗೆ ಸಂಗ್ರಹಿಸಿವೆ. ಪ್ರತಿ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ಆರ್ಥಿಕ ವರ್ಷದ ಗುರಿ ನಿಗದಿಯಾಗುತ್ತದೆ. 2025-26ರಲ್ಲಿ ಜೂನ್ 30ರೊಳಗೆ ಕಟ್ಟಡ ಮತ್ತು ಭೂಮಿ ತೆರಿಗೆ ಪಾವತಿಸಿದವರಿಗೆ ಶೇ 5 ರಿಯಾಯಿತಿ ನೀಡಲಾಗಿದೆ. ಈ ಬಗ್ಗೆ ಪ್ರಚಾರ ನೀಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.