ADVERTISEMENT

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:30 IST
Last Updated 1 ಜುಲೈ 2025, 14:30 IST
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು   

ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಇವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಂತೆಕಟ್ಟೆ ಮಹತ್ಮಾ ಗಾಂಧಿ ವಾಣಿಜ್ಯ ಸಂಕೀರ್ಣ ಸೋರುತಿದ್ದು, ಈ ಬಗ್ಗೆ ಹಿಂದಿನ ಸಭೆಯಲ್ಲಿ ಶಾಸಕರು ಗುತ್ತಿಗೆದಾರರೇ ದುರಸ್ತಿಗೊಳಿಸಬೇಕು ಎಂದು ಸೂಚಿಸಿದ್ದಾರೆ. ಶಾಸಕರು ಹೇಳಿದ್ದನ್ನು ಪಾಲಿಸದೆ ಇದ್ದರೆ ಸಾಮಾನ್ಯ ಸಭೆಯ ಸೂಚನೆಗೆ ಬೆಲೆ ಇಲ್ಲದಂತಾಗುತ್ತಾದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಜಯಾನಂದ ಗೌಡ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣದಲ್ಲಿ ಒಂದು ವರ್ಷದ ಬಾಡಿಗೆ ಬಾಕಿ ಉಳಿದವರ ಬಗ್ಗೆ ಪೊಲೀಸರ ಸಹಕಾರದಲ್ಲಿ ಬಾಡಿಗೆ ವಸೂಲಿ ಮಾಡುವ ಅವಕಾಶ ನಮಗಿದೆ ಎಂದು ಮುಖ್ಯಾಧಿಕಾರಿ ರಾಜೇಶ್ ತಿಳಿಸಿದಾಗ ಬಾಡಿಗೆದಾರರ ಬಳಿ ತೆರಳಿ ಅಧಿಕಾರಿಗಳು ಬಾಡಿಗೆ ಸಂಗ್ರಹಿಸಬೇಕು ಎಂದು ಸದಸ್ಯರು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆದಾಗ ಬಾಡಿಗೆದಾರರ ಬಳಿ ಅಧಿಕಾರಿಗಳು ಹೋಗಿ ಬಾಡಿಗೆ ಸಂಗ್ರಹಿಸುವ ಪದ್ಧತಿ ಇಲ್ಲ. ಬಾಡಿಗೆದಾರರು ಅವರಾಗಿಯೇ ಬಂದು ಪಾವತಿಸಬೇಕು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಬರಬೇಕು. ಮುಂದೆ ಹೆದ್ದಾರಿ ವಿಸ್ತರಣೆ ಆಗುವ ಸಂದರ್ಭ ಹಲವು ಅಂಗಡಿಗಳು ತೆರವಾಗಲಿವೆ. ಪಟ್ಟಣದಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಣೆ ಆಗುವುದರಿಂದ 15 ಮೀ. ರಸ್ತೆಯಲ್ಲಿ 6 ಅಡಿ ಚರಂಡಿಗೆ ತೆಗೆದುಕೊಂಡಿದ್ದಾರೆ. ಇದನ್ನು ಪರಿಷ್ಕರಿಸಬೇಕು. ಈ ಬಗ್ಗೆ ಜನಸಾಮಾನ್ಯರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಸದಸ್ಯ ಜಗದೀಶ್ ಆಗ್ರಹಿಸಿದರು.

ಪಟ್ಟಣದಲ್ಲಿ ಕಾಮಗಾರಿ ನಿರ್ವಹಿಸುವ ಸಂದರ್ಭ ಅಧಿಕಾರಿಗಳನ್ನು ಕರೆಸಿ ಮಾಹಿತಿ ನೀಡುವಂತೆ ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣ ಹೆಚ್ಚಾಗುತ್ತಿದ್ದು, ತಕ್ಷಣವೇ ಫಾಗಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಅಧ್ಯಕ್ಷ ಜಯಾನಂದ ಗೌಡ ಸೂಚಿಸಿದರು.

ಸುದೆಮುಗೇರಿನಲ್ಲಿ ಮರದ ರೆಂಬೆ ವಿದ್ಯುತ್ ತಂತಿಗೆ ಬಿದ್ದು ಅಲ್ಲಿನ ಜನ ರಾತ್ರಿಯಿಡೀ ಕತ್ತಲಲ್ಲಿ ಕುಳಿತುಕೊಳ್ಳುವಂತಾಗಿದೆ. ಮಳೆಗಾಲಕ್ಕೂ ಮುನ್ನ ಮರದ ರೆಂಬೆ ತೆರವುಗೊಳಿಸದಿರುವುದು ನಿರ್ಲಕ್ಷ್ಯದ ವರ್ತನೆ. ತೆರವಿಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಅವರು ಪ್ರತಿಕ್ರಿಯಿಸಿದೆ ಇದ್ದರೆ ತಹಶೀಲ್ದಾರ್‌ಗೆ ದೂರು ನೀಡಿ ಎಂದು ಜಗದೀಶ್ ಆಕ್ರೋಶ ವ್ಯಕ್ತಪಡಿಸಿದಾಗ ಮುಖ್ಯಾಧಿಕಾರಿ ರಾಜೇಶ್ ಸರಿಪಡಿಸುವ ಭರವಸೆ ನೀಡಿದರು.

ನಗರದಲ್ಲಿ ಇ–ಖಾತೆ, ಬಿ–ಖಾತೆ ಮಾಡಿಸಲು ಆದೇಶಿಸಿ ಜನಸಾಮಾನ್ಯರು ಮತ್ತೆ ಒದ್ದಾಡುವಂತಾಗಿದೆ. ಕರ್ನಾಟಕ ವನ್ ನಲ್ಲಿ ಮೊತ್ತ ಪಾವತಿಸಿ ಖಾತೆ ಪಡೆಯುವ ಅವಕಾಶವಿದೆ. ಪಟ್ಟಣ ಪಂಚಾಯಿತಿಯಲ್ಲೇ ವ್ಯವಸ್ಥೆ ಕಲ್ಪಿಸಿ ಎಂದು ಸದಸ್ಯರು ಆಗ್ರಹಿಸಿದಾಗ ನಮ್ಮ ನಗರದಲ್ಲಿ ಕರ್ನಾಟಕ ವನ್ ಸೀಮಿತ ಇರುವುದರಿಂದ ಮುಂದೆ ಪಟ್ಟಣ ಪಂಚಾಯಿತಿಯಲ್ಲೇ ಅರ್ಜಿ ಸ್ವೀಕರಿಸುತ್ತೇವೆ. ಅರ್ಜಿದಾರರು ನೇರವಾಗಿ ಪಟ್ಟಣ ಪಂಚಾಯಿತಿಗೆ ಬರಬಹುದು ಎಂದು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ತಿಳಿಸಿದರು.

ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ., ಎಂಜಿನಿಯರ್ ಮಹಾವೀರ ಆರಿಗ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.