ADVERTISEMENT

ದಕ್ಷಿಣ ಕನ್ನಡ | ದ್ವಿಭಾಷಾ ಶಿಕ್ಷಣ: ಮತ್ತೆ 3 ಶಾಲೆ ಸೇರ್ಪಡೆ

ಕನ್ನಡ ಮಾಧ್ಯಮಕ್ಕೆ ಮಕ್ಕಳ ನೋಂದಣಿಗೆ ಪಾಲಕರ ನಿರಾಸಕ್ತಿ

ಸಂಧ್ಯಾ ಹೆಗಡೆ
Published 10 ಜೂನ್ 2025, 6:20 IST
Last Updated 10 ಜೂನ್ 2025, 6:20 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಮತ್ತೆ ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ದ್ವಿಭಾಷಾ ಬೋಧನೆಗೆ ಅನುಮತಿ ದೊರೆತಿದ್ದು, ಈಗಾಗಲೇ ತರಗತಿಗಳು ಪ್ರಾರಂಭವಾಗಿವೆ. ಆದರೆ, ಇದೇ ಶಾಲೆಗಳ ಕನ್ನಡ ಮಾಧ್ಯಮ ತರಗತಿಗಳು ಸೊರಗಲಾರಂಭಿಸಿವೆ.

ಜಿಲ್ಲೆಯಲ್ಲಿ 2019ರಿಂದ 2024ರವರೆಗೆ ಒಟ್ಟು 120 ಶಾಲೆಗಳಿಗೆ ದ್ವಿಭಾಷೆ ಬೋಧನೆಗೆ ಸರ್ಕಾರ ಅನುಮತಿ ನೀಡಿದ್ದು, ಹೊಸದಾಗಿ ಸೇರ್ಪಡೆಯಾಗಿರುವ ಮೂರು ಶಾಲೆಗಳು ಸೇರಿದಂತೆ ಒಟ್ಟು 123 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಬೋಧನೆ ನಡೆಯುತ್ತಿದೆ.

ಮೂಡುಬಿದಿರೆ ತಾಲ್ಲೂಕಿನ ಮೂಡುಮಾರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರು ದಕ್ಷಿಣ ಬ್ಲಾಕ್ ವ್ಯಾಪ್ತಿಯ ಗುರುಕಂಬಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಡ್ಡೂರು ಹಿರಿಯ ಪ್ರಾಥಮಿಕ ಶಾಲೆಗೆ 2025–26ನೇ ಸಾಲಿನಲ್ಲಿ ದ್ವಿಭಾಷಾ ಶಿಕ್ಷಣ ಬೋಧನೆಗೆ ಅನುಮತಿ ದೊರೆತಿದೆ. ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮದ ಪ್ರತ್ಯೇಕ ತರಗತಿಗಳು ಇರುತ್ತವೆ. ಶಿಕ್ಷಕರು, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಮಾಧ್ಯಮದಲ್ಲಿ ಪಾಠ ಮಾಡುತ್ತಾರೆ.

ADVERTISEMENT

ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಸೇರಿ ಒಟ್ಟು 892 ಸರ್ಕಾರಿ ಶಾಲೆಗಳು ಇವೆ. ಹೆಚ್ಚಿನ ಶಾಲೆಗಳು ದ್ವಿಭಾಷೆಗೆ ಅನುಮತಿ ನೀಡುವಂತೆ ಇಲಾಖೆಗೆ ದುಂಬಾಲು ಬೀಳುತ್ತಿವೆ. ಅಲ್ಲಿನ ಸೌಲಭ್ಯ, ಶಿಕ್ಷಕರ ಲಭ್ಯತೆ, ನಿಗದಿತ ಮಾನದಂಡಗಳನ್ನು ಆಧರಿಸಿ ಸರ್ಕಾರ ಅನುಮತಿ ನೀಡುತ್ತದೆ. ಕೆಲವು ಶಾಲೆಗಳು ಅನುಮತಿಯ ನಿರೀಕ್ಷೆಯಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕನ್ನಡಕ್ಕೆ ಅಪಾಯ: ಇಂಗ್ಲಿಷ್ ಮಾಧ್ಯಮದ ಬೇಡಿಕೆ ಹೆಚ್ಚುತ್ತಿದೆ. ಕೆಲವು ಶಾಲೆಗಳಲ್ಲಿ 2–3 ವಿಭಾಗ ಮಾಡಿರುವ ಉದಾಹರಣೆಗಳೂ ಇವೆ. ಆದರೆ, ದ್ವಿಭಾಷಾ ಮಾಧ್ಯಮ ಬೋಧನೆ ಮಂಜೂರು ಆಗಿರುವ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. ಕೆಲವು ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದ್ದರೆ, ಇನ್ನು ಕೆಲವು ಶಾಲೆಗಳಲ್ಲಿ ಕನಿಷ್ಠ ಸಂಖ್ಯೆಯ ಮಕ್ಕಳೂ ಇಲ್ಲ. ಕನ್ನಡ ಭಾಷೆ ಉಳಿವಿನ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆ ಎಂದು ಕನ್ನಡ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟರು.

ಎಲ್ಲೆಲ್ಲಿ ಎಷ್ಟೆಷ್ಟು ಶಾಲೆಗಳು: ಬಂಟ್ವಾಳ ಬ್ಲಾಕ್‌ನಲ್ಲಿ 29, ಬೆಳ್ತಂಗಡಿ 24, ಮಂಗಳೂರು ಉತ್ತರ 16, ಮಂಗಳೂರು ದಕ್ಷಿಣ 24, ಮೂಡುಬಿದಿರೆ 6, ಪುತ್ತೂರು 15, ಸುಳ್ಯ ಬ್ಲಾಕ್‌ನ 9 ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ಬೋಧನೆ ನಡೆಯುತ್ತದೆ.

‘ದೂರದ ಊರುಗಳ ವಿದ್ಯಾರ್ಥಿಗಳು’

ದ್ವಿಭಾಷಾ ಶಿಕ್ಷಣ ಹೊಂದಿರುವ ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ 41 ಬಾಲಕರು, 37 ಬಾಲಕಿಯರು ಸೇರಿದಂತೆ ಒಟ್ಟು 78 ಮಕ್ಕಳು ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದ್ದಾರೆ.

ಇಂಗ್ಲಿಷ್ ಮಾಧ್ಯಮ ಪ್ರಾರಂಭವಾದ ಮೇಲೆ ಇಂಗ್ಲಿಷ್ ಮಾಧ್ಯಮಕ್ಕೆ ಸೇರಲು ಪೈಪೋಟಿ ಇದೆ. ಕನ್ನಡ ಮಾಧ್ಯಮಕ್ಕೆ ಇನ್ನೂ ವಿದ್ಯಾರ್ಥಿಗಳ ನೋಂದಣಿ ಆಗಿಲ್ಲ. 15–20 ಕಿ.ಮೀ ದೂರದಿಂದ ಬರುವ ಮಕ್ಕಳೂ ಇದ್ದಾರೆ. ವಗ್ಗ, ಕೊಯಿಲ, ಸಜಿಪ, ವಾಮದಪದವು ಭಾಗದ ವಿದ್ಯಾರ್ಥಿಗಳೂ ಇದ್ದಾರೆ. ಈ ಸರ್ಕಾರಿ ಶಾಲೆಯನ್ನು ದತ್ತು ಪಡೆದ ಮೇಲೆ ಶ್ರೀದುರ್ಗಾ ಚಾರಿಟಬಲ್ ಟ್ರಸ್ಟ್ ಮಕ್ಕಳಿಗೆ ಶಾಲೆಗೆ ಬರಲು ಬಸ್ ವ್ಯವಸ್ಥೆ ಕಲ್ಪಿಸಿದೆ. ಇದೇ ಬಸ್‌ನಲ್ಲಿ ಮಕ್ಕಳು ದೂರದ ಊರುಗಳಿಂದ ಬರುತ್ತಾರೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್.

‘ಶಿಕ್ಷಕರಿಗೆ ವಿಶೇಷ ತರಬೇತಿ’

ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ಹಾಲಿ ಇರುವ ಶಿಕ್ಷಕರನ್ನೇ ತರಬೇತುಗೊಳಿಸಲಾಗುತ್ತದೆ. ಡಯಟ್ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ದಾಖಲಾತಿಗೆ ಮಿತಿ ನಿಗದಿಪಡಿಸಿಲ್ಲ. ಆದರೆ, ಕೊಠಡಿ, ಶಿಕ್ಷಕರ ಲಭ್ಯತೆ ಆಧರಿಸಿ ವಿದ್ಯಾರ್ಥಿಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಡಿಡಿಪಿಐ ಗೋವಿಂದ ಮಡಿವಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.