ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪರಾಮರ್ಶಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ನೇತೃತ್ವದ ನಿಯೋಗವು ಇದೇ 9ರಂದು ಇಲ್ಲಿಗೆ ಭೇಟಿ ನೀಡಲಿದೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ವಿ.ಸುನಿಲ್ ಕುಮಾರ್, ವಿಧಾನ ಪರಿಷತ್‌ನ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಈ ನಿಯೋಗದಲ್ಲಿ ಇರಲಿದ್ದಾರೆ.
‘ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ, ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ತೋರುತ್ತಿರುವ ಇಬ್ಬಗೆ ನೀತಿ, ಮುಸ್ಲಿಂ ಮುಖಂಡರ ರಾಜೀನಾಮೆ ನಾಟಕಕ್ಕೆ ಬೆದರಿ, ಅಲ್ಪಸಂಖ್ಯಾತರ ಒಲೈಕೆಗಾಗಿ ಹಿಂದೂ ಮುಖಂಡರ ಮೇಲೆ ಎಫ್.ಐ.ಆರ್ ದಾಖಲು, ರಾತ್ರಿ ಹೊತ್ತಲ್ಲಿ ಪೊಲೀಸರು ಮನೆಗೆ ನುಗ್ಗಿ ತನಿಖೆ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವುದು, ಆರ್‌ಎಸ್‌ಎಸ್ ಪ್ರಮುಖರ ಮನೆಗೆ ಪ್ರವೇಶಿಸಿ ಫೋಟೊ ತೆಗೆಸುವ ಮೂಲಕ ಮಾನಸಿಕ ಹಿಂಸೆ ನೀಡುವ ಘಟನೆಗಳು ನಡೆಯುತ್ತಿವೆ. ಇವುಗಳ ಪರಿಶೀಲನೆ ನಡೆಸಲು ನಿಯೋಗ ಭೇಟಿ ನೀಡಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.