ಬಿಜೆಪಿ
ಪುತ್ತೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು ಸೃಜನ ಪಕ್ಷಾಪಾತ, ಭ್ರಷ್ಟಾಚಾರ ಹಾಗೂ ವಿರೋಧ ಪಕ್ಷದವರನ್ನು ಧಮನಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿ ಮತ್ತು ನಗರಸಭೆಯ ಎದುರು ಇದೇ 23ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮುಖಂಡ ಸಂಜೀವ ಮಠಂದೂರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಹಿರಂಗವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಂಘರ್ಷಕ್ಕೆ ಸರ್ಕಾರ ಎಡೆಮಾಡಿಕೊಟ್ಟಿದೆ. ಕೊಲೆ ಆದಾಗ ಬಿಂಬಿಸುವ ರೀತಿ ಮತ್ತು ಸರ್ಕಾರದ ನಡವಳಿಕೆ ಜನರನ್ನು ರೊಚ್ಚಿಗೆಬ್ಬಿಸಿದೆ. ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕಾರ್ಯಪಡೆ ಆರಂಭಿಸಿದೆ. ಆದರೆ ಇಲ್ಲಿನ ಕಲುಷಿತ ವಾತಾವರಣಕ್ಕೆ ಸರ್ಕಾರವೇ ಹೊಣೆ ಎಂಬುದನ್ನು ಮರೆತಿದೆ ಎಂದರು.
ಮೇ ತಿಂಗಳಲ್ಲಿ ಮಳೆಯಾಗಿ ಪ್ರಕೃತಿ ವಿಕೋಪ ಆದಾಗ ಸರ್ಕಾರ ಗಾಢ ನಿದ್ದೆಯಲ್ಲಿತ್ತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಮಾಡಿ ಸಮಸ್ಯೆ ಆದವರಿಗೆ ಪರಿಹಾರ ನೀಡಬೇಕು ಎಂದು ತಿಳಿಸಿದ್ದರು. ಆದರೆ ಅದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಹಣ ಬಂದಿಲ್ಲ ಎಂದು ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ದೊರಕಿದೆ ಎಂದು ಅವರು ಆರೋಪಿಸಿದರು.
ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.