ಕಡಬ (ಉಪ್ಪಿನಂಗಡಿ): ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಡಬ ತಾಲ್ಲೂಕು ಮತ್ತು ಕಡಬ ಪಟ್ಟಣ ಪಂಚಾಯಿತಿ ಅನುಷ್ಠಾನಿಸಿ ಜನರ ಬೇಡಿಕೆಯನ್ನು ಈಡೇರಿಸಿದೆ. ಇದೀಗ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಷಣೆಯಾಗಿದ್ದು, ಮೊದಲ ಚುನಾವಣೆಯಲ್ಲಿ ಬಿಜೆಪಿ ಗದ್ದುಗೆ ಹಿಡಿಯಲು ಕಾರ್ಯಕರ್ತರ ಅವಿರತ ಶ್ರಮ ಅಗತ್ಯ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಕಡಬ ಮಹಾಶಕ್ತಿ ಕೇಂದ್ರದ ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಂಕಲ್ಪ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕಡೆಗಣಿಸುತ್ತಾ ಬಂದಿದೆ. ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕೆಂಪುಕಲ್ಲು, ಮರಳು ಸಿಗದೆ ಕಾರ್ಮಿಕರು ಕಂಗಾಲಾಗಿದ್ದಾರೆ. ಸಮಸ್ಯೆಗೆ ಪರಿಹಾರ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪಕ್ಷದ ತೀರ್ಮಾನದಂತೆ ನಡೆಯುತ್ತದೆ. ಅಭ್ಯರ್ಥಿ ಯಾರೇ ಆದರೂ ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಬೇಕು ಎಂದರು.
ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಶಾಸಕ ಡಾ.ಭರತ್ ಶೆಟ್ಟಿ, ಮುಖಂಡ ಎಸ್.ಅಂಗಾರ, ಕಡಬ ಪಟ್ಟಣ ಪಂಚಾಯಿತಿ ಚುನಾವಣೆ ನಿರ್ವಹಣಾ ಸಮಿತಿಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ, ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ., ಪ್ರಧಾನ ಕಾರ್ಯದರ್ಶಿ ಆಶೋಕ್ ಕುಮಾರ್, ಕಡಬ ಪಟ್ಟಣ ಪಂಚಾಯಿತಿ ಚುನಾವಣಾ ನಿರ್ವಹಣಾ ಸಮಿತಿಯ ಬಾಲಕೃಷ್ಣ ಬಾಣಜಾಲು ಭಾಗವಹಿಸಿದ್ದರು.
ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ವಂದಿಸಿದರು. ವಿನಯ ಕುಮಾರ್ ಕಂದಡ್ಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.