ADVERTISEMENT

ಬೋಳಿಯಾರ್ ಗ್ರಾಮದ ಅಭಿವೃದ್ಧಿಗೆ ಒತ್ತು

ನರೇಗಾ: ₹ 16 ಲಕ್ಷ ವೆಚ್ಚದ‌ಲ್ಲಿ 38 ಅಭಿವೃದ್ಧಿ ಕಾಮಗಾರಿ

ಸತೀಶ್ ಕೊಣಾಜೆ
Published 9 ಮೇ 2022, 3:16 IST
Last Updated 9 ಮೇ 2022, 3:16 IST
ಬೋಳಿಯಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ತೋಡಿನ ಹೂಳೆತ್ತುವ ಕಾಮಗಾರಿ.
ಬೋಳಿಯಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ತೋಡಿನ ಹೂಳೆತ್ತುವ ಕಾಮಗಾರಿ.   

ಮುಡಿಪು: ಗ್ರಾಮೀಣ ಪ್ರದೇಶವಾಗಿರುವ ಉಳ್ಳಾಲ ತಾಲ್ಲೂಕಿನ ಬೋಳಿಯಾರ್ ಗ್ರಾಮದಲ್ಲಿ 2021-22ನೇ ಅವಧಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹತ್ತು ಹಲವಾರು ಉಪಯುಕ್ತ ಕಾಮಗಾರಿಗಳನ್ನು ನಡೆಸಿ, ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಬೋಳಿಯಾರ್ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸುಮಾರು ₹ 16 ಲಕ್ಷ ವೆಚ್ಚದ‌ಲ್ಲಿ ಒಟ್ಟು 38 ಅಭಿವೃದ್ಧಿ ಕಾಮಗಾರಿ ಗಳನ್ನು ಅನುಷ್ಠಾನ ಮಾಡಲಾಗಿದೆ. ಪ್ರಮುಖವಾಗಿ ಸಾರ್ವಜನಿಕ ತೋಡಿಗೆ ಪ್ರವಾಹ ನಿಯಂತ್ರಣ ತಡೆಗೋಡೆ ರಚನೆ, ದನದ ಹಟ್ಟಿ‌ ನಿರ್ಮಾಣ, ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣ, ಅಡಿಕೆ ತೋಟದ ಅಭಿವೃದ್ಧಿ, ಸೋಕ್ ಪಿಟ್‌ ರಚನೆ, ತೆರದ ಬಾವಿ ರಚನೆ, ಇಂಗುಗುಂಡಿ ನಿರ್ಮಾಣ, ಆಡು ಸಾಕಾಣಿಕೆ ಶೆಡ್ ನಿರ್ಮಾಣ, ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಸಾರ್ವಜನಿಕ ತೋಡಿನ ಹೂಳೆತ್ತುವುದು, ದನದ ಹಟ್ಟಿ ನಿರ್ಮಾಣ, ತೋಟಗಾರಿಕೆ ಅಭಿವೃದ್ಧಿ ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ.

ಜಕ್ರಿಬೆಟ್ಡು ಕರುಣಾಕರ ಅವರ ಮನೆ ಬಳಿ ತೋಡಿನ ಬದಿಯ ಪ್ರವಾಹ ನಿಯಂತ್ರಣ ತಡೆಗೋಡೆ ನಿರ್ಮಾಣ, ಬೋಳಿಯಾರ್ ದೇವಾಲಯ ಬಳಿಯ ತೋಡಿಗೆ ಪ್ರವಾಹ ನಿಯಂತ್ರಣ ತಡೆಗೋಡೆ ನಿರ್ಮಾಣ, ಮಾಗಂದಡಿ ಬೋಳಿಯಾರ್ ಬಳಿ ಪರಂಬೋಕು ಜಾಗದ ತೋಡಿನಲ್ಲಿ ಹೂಳೆತ್ತುವ ಯೋಜನೆ, ದೇವರಗುಡ್ಡೆ, ಮಯ್ಯಲ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ತೆರದ ಬಾವಿ ರಚನೆ, ದನದ ಹಟ್ಟಿ ನಿರ್ಮಾಣ ಹೀಗೆ ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿಗಳು ಜನರಿಗೆ ಉದ್ಯೋಗವನ್ನು ನೀಡಿವೆ.

ADVERTISEMENT

ನರೇಗಾ ಯೋಜನೆಯನ್ನು ಬೋಳಿಯಾರ್ ಗ್ರಾಮದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಪ್ರಮುಖವಾಗಿ ಗ್ರಾಮಸ್ಥರು, ಜಿಲ್ಲಾ ಪಂಚಾಯಿತಿ, ಪಂಚಾಯಿತಿ ಹಾಗೂ ಇಲಾಖಾ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಕಾರವು ಯೋಜನೆ ಫಲಪ್ರದವಾಗಲು ಕಾರಣವಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಯೋಜನೆಗಳು ಗ್ರಾಮದ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿವೆ ಎಂದು ಪಿಡಿಒಕೃಷ್ಣ ಕುಮಾರ್ ಪ್ರತಿಕ್ರಿಯಿಸಿದರು.

‘ಗ್ರಾಮದ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಕನಸು. ಮುಂದಿನ ಹಂತದಲ್ಲಿ ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೆಸಿಂತಾ ಪಿಂಟೊ ತಿಳಿಸಿದರು.

‘ಮಳೆಗಾಲದ ತೊಂದರೆ ನಿವಾರಣೆ’

‘ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮದಲ್ಲಿ ಬಹುತೇಕ ಜನರಿಗೆ ಉದ್ಯೋಗವಿಲ್ಲದೆ ತೊಂದರೆಯಾಗಿತ್ತು. ಆ ಸಂದರ್ಭದಲ್ಲಿ ನಾವು ಪರಿಸರದ ನಾಗರಿಕರು ಸೇರಿಕೊಂಡು ಉದ್ಯೋಗ ಖಾತ್ರಿ ಯೋಜನೆಯಡಿ ಅಮ್ಮೆಂಬಳ ಉದ್ದ ಬಳಿ ತೋಡಿನ ಹೂಳೆತ್ತುವ ಕೆಲಸ ಮಾಡಿದ್ದೇವೆ. ಇದರಿಂದ ನಮಗೂ ಅನುಕೂಲ ಆಗಿದೆ, ಜೊತೆಗೆ ಕೃಷಿ ತೋಟ, ಗದ್ದೆಗಳಿಗೆ ಮಳೆಗಾಲದಲ್ಲಿ ಎದುರಾಗುತ್ತಿದ್ದ ತೊಂದರೆಗಳೂ ದೂರವಾಗಿವೆ’ ಎಂದು ಬೋಳಿಯಾರ್ ಗ್ರಾಮಸ್ಥ ರವೀನ ಬಂಗೇರ ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.