ADVERTISEMENT

ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:15 IST
Last Updated 4 ಜುಲೈ 2022, 13:15 IST
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು 
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು    

ಉಜಿರೆ: ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ವಿಭಿನ್ನವಲ್ಲ. ಎಲ್ಲವೂ ಒಂದೇ. ಆದರೆ ಕಾನೂನಿನಲ್ಲಿ ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ಬೇರೆ ಬೇರೆಯಾಗಿದ್ದು, ಅನೈತಿಕತೆ ಅಪರಾಧ ಅಲ್ಲ ಎಂಬ ಭಾವನೆ ಮೂಡಿದೆ ಎಂದು ಸಾಹಿತಿ ಎಸ್.ಎನ್. ಸೇತುರಾಮ್ ಹೇಳಿದರು.

ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಲ್ಲಿ ಪ್ರಕಟಿಸಲಾದ ‘ಜ್ಞಾನ ವಿಕಾಸ’ ಮತ್ತು ‘ಜ್ಞಾನ ಪ್ರಕಾಶ’ ಪುಸ್ತಕಗಳನ್ನು ಸೋಮವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪರಸ್ಪರ ಪ್ರೀತಿ-ವಿಶ್ವಾಸದಿಂದ, ಕೃತಜ್ಞತೆ ಹಾಗೂ ಗೌರವದಿಂದ ಬದುಕುವ ಸಭ್ಯ, ಸುಸಂಸ್ಕೃತ ನಾಗರಿಕರೆ ದೇಶದ ಅಮೂಲ್ಯ ಮಾನವ ಸಂಪನ್ಮೂಲ ಎಂದರು.

ADVERTISEMENT

‘ಇಂದು ನೈತಿಕತೆ, ಸತ್ಯ, ಸಭ್ಯತೆ ಕುಸಿದಿದೆ. ಪ್ರೀತಿ ವಿಶ್ವಾಸದಿಂದ, ಪರಸ್ಪರ ಹೊಂದಿಕೊಂಡು ಗೌರವ, ಕೃತಜ್ಞತೆಯೊಂದಿಗೆ ಜೀವನವೇ ನಮ್ಮ ಉದ್ದೇಶವಾಗಬೇಕು’ ಎಂದರು.

ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ನೀಡಿ ಅಭಿನಂದಿಸಿದ ನಟ ಮಾಸ್ಟರ್ ಆನಂದ್ ಮಾತನಾಡಿ, ಧರ್ಮಸ್ಥಳದ ದರ್ಶನದಿಂದ ನಮ್ಮ ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಬೇಕು’ ಎಂದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿ, ಜ್ಞಾನ ಸಂಗ್ರಹದೊಂದಿಗೆ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಪ್ರತಿಭಾ ವಿಕಸನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಧರ್ಮಸ್ಥಳ ಕುರಿತು ‘ಮಾತು ಬಿಡ ಮಂಜುನಾಥ’ ಎಂಬ ಮಾತಿದೆ. ಇಲ್ಲಿ ಮಾತೇ ಮಾಣಿಕ್ಯ. ಸತ್ಯ, ಧರ್ಮ, ನ್ಯಾಯ, ನೀತಿಯೊಂದಿಗೆ ಎಲ್ಲರೂ ಸಾರ್ಥಕ ಜೀವನ ನಡೆಸಬೇಕು ಎಂದರು.

ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಎಸ್.ಜಿ. ನಾಗೇಶ್, ಹೇಮಾವತಿ ವಿ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.