ADVERTISEMENT

ಇನ್ನೂ ಬಿಡುಗಡೆಯಾಗಿಲ್ಲ ಕಳೆದ ವರ್ಷದ ಪರಿಹಾರ

ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ವೈಫಲ್ಯ: ಶಾಸಕ ವೇದವ್ಯಾಸ ಕಾಮತ್ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 8:26 IST
Last Updated 20 ಜೂನ್ 2025, 8:26 IST
ಸುದ್ದಿಗೋಷ್ಠಿಯಲ್ಲಿ ಡಿ.ವೇದವ್ಯಾಸ ಕಾಮತ್ ಮಾತನಾಡಿದರು. ಯತೀಶ್ ಆರ್ವರ್‌, ಕಿಶೋರ್ ಕುಮಾರ್ ಪುತ್ತೂರು, ಡಾ.ವೈ.ಭರತ್ ಶೆಟ್ಟಿ, ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಡಿ.ವೇದವ್ಯಾಸ ಕಾಮತ್ ಮಾತನಾಡಿದರು. ಯತೀಶ್ ಆರ್ವರ್‌, ಕಿಶೋರ್ ಕುಮಾರ್ ಪುತ್ತೂರು, ಡಾ.ವೈ.ಭರತ್ ಶೆಟ್ಟಿ, ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು   

ಮಂಗಳೂರು: ‘ಕಳೆದ ವರ್ಷದ ನೈಸರ್ಗಿಕ ವಿಕೋಪದ ಪರಿಹಾರ ಮೊತ್ತವೇ ಸಂತ್ರಸ್ತರ ಕೈಗೆ ಇನ್ನೂ ಸೇರಿಲ್ಲ. ದುರಸ್ತಿ ಕಾಮಗಾರಿಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲ. ಇದರ ಬೆನ್ನಲ್ಲೇ ಈ ವರ್ಷವೂ ಜಿಲ್ಲೆಯಲ್ಲಿ  ಭಾರಿ ಮಳೆಯಿಂದ ಮನೆ, ಆಸ್ತಿಗಳಿಗೆ ಹಾನಿಯಾಗಿದೆ’ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಜಿಲ್ಲೆಯನ್ನು ಸರ್ಕಾರ ಕಡೆಗಣಿಸಿದೆ. ಜಿಲ್ಲೆಯ ಶಾಸಕರು ಸಲ್ಲಿಸಿರುವ ಯಾವುದೇ ಅಭಿವೃದ್ಧಿ ಪ್ರಸ್ತಾವಗಳಿಗೆ ಅನುದಾನ ನೀಡಿಲ್ಲ. ಎರಡು ವರ್ಷದಲ್ಲಿ ಒಂದೇ ಒಂದು ಕಾಮಗಾರಿಯ ಶಿಲಾನ್ಯಾಸವೂ ನಡೆದಿಲ್ಲ. ಶಾಸಕರ ಅನುದಾನ ₹ 2 ಕೋಟಿ ಹೊರತಾಗಿ ಕ್ಷೇತ್ರಕ್ಕೆ ಬಿಡಿಗಾಸೂ ಬಿಡುಗಡೆಯಾಗಿಲ್ಲ’ ಎಂದರು.

‘ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ತಡೆಗೋಡೆ ಹಾನಿಗೊಂಡಿದ್ದಕ್ಕೆ ಪರಿಹಾರ ನೀಡಲಾಗಿತ್ತು. ಆದರೆ ಈಗಿನ ಸರ್ಕಾರ  ಮಳೆಯಿಂದ ಹಾನಿಗೊಳಗಾದ ತಡೆಗೋಡೆಗಳಿಗೆ ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಮೊತ್ತವನ್ನೂ ಕಡಿಮೆ ಮಾಡಲಾಗಿದೆ’ ಎಂದು ದೂರಿದರು. 

ADVERTISEMENT

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ)  ತೀರ್ಮಾನಗಳೆಲ್ಲವನ್ನೂ ಬೆಂಗಳೂರಿನಲ್ಲೇ ಕೈಗೊಳ್ಳಲಾಗುತ್ತಿದೆ. ಮುಡಾದಲ್ಲಿ ಕೆಲಸ ಆಗಬೇಕಾದರೆ ಬೆಂಗಳೂರಲ್ಲಿ ಅರ್ಜಿ ಸಲ್ಲಿಸಿ, ಅದು ಸಭೆಯ ಕಾರ್ಯಸೂಚಿಯಲ್ಲಿ ಬರುವಂತೆ ಮಾಡಬೇಕಾದ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯವು ತನ್ನ ಪಾಲಿನ ಅನುದಾನ ಭರಿಸದ ಕಾರಣ ಕೇಂದ್ರ ಸರ್ಕಾರಿಂದ ಬಡವರಿಗೆ ಮನೆ ಒದಗಿಸುವ ಯೋಜನೆಯೂ ಸ್ಥಗಿತಗೊಂಡಿದೆ ಎಂದರು

ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್‌ ಆರ್ವರ್, ಖಜಾಂಚಿ ಸಂಜಯ್ ಪ್ರಭು ಭಾಗವಹಿಸಿದ್ದರು.

‘ಸಚಿವರಿಗೆ ಪಾಲಿಕೆ ಮುಡಾ ಎಟಿಎಂ’ 

‘ಅವ್ಯವಸ್ಥೆ ಆಗರವಾದ ಮಂಗಳೂರು ಮಹಾನಗರ ಪಾಲಿಕೆ ಹಾಗೂ  ಮುಡಾ ಸಚಿವರ ಪಾಲಿಗೆ ‘ಎಟಿಎಂ’ನಂತಾಗಿದೆ. ಸಚಿವರ ಧನದಾಹದಿಂದ ಜನ ಹೈರಾಣಾಗಿದ್ದಾರೆ. ಮುಡಾಕ್ಕೆ ಸಲ್ಲಿಸುವ ಅರ್ಜಿ ವಿಲೇವಾರಿಗೆ ಬೆಂಗಳೂರಿನ ಸಮ್ಮತಿ ಏಕೆ ಎಂದು ಎಲ್ಲರಿಗೂ ಅರ್ಥವಾಗುತ್ತದೆ’ ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಆರೋಪಿಸಿದರು. ‘ಸರ್ಕಾರದ ಭ್ರಷ್ಟಾಚಾರದಿಂದ ಜನರಷ್ಟೇ ಅಲ್ಲ ಅಧಿಕಾರಿಗಳು ಗುತ್ತಿಗೆದಾರರೂ  ರೋಸಿ ಹೋಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಇಲ್ಲ ವೈದ್ಯರು ಕೈಯಿಂದ ಹಣ ಹಾಕಿ ಬಡವರಿಗೆ ಔಷಧ ನೀಡುವ ಸ್ಥಿತಿ ಇದೆ. ಭ್ರಷ್ಟಾಚಾರವನ್ನು ಖಂಡಿಸಿ ಪಾಲಿಕೆ ಕೇಂದ್ರ ಕಚೇರಿ ಎದುರು ಇದೇ 23ರಂದು ಪ್ರತಿಭಟನೆ ನಡೆಸಲಿದ್ದೇವೆ’  ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.